ಸಣ್ಣ ಸಮುದಾಯದವರಿಂದ ಪ್ಯಾಕೇಜ್‌ಗೆ ಒತ್ತಡ: ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ- ಶ್ರೀರಾಮುಲು

ಬೆಂಗಳೂರು, ಮೇ 26, ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವರ್ಗಗಳಿಗೆ ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.  ಈಗ ಸಣ್ಣ ಸಣ್ಣ ಸಮುದಾಯದವರು ಕೂಡ ಸಹಾಯಧನ ಕೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಯುಷ್ ವೈದ್ಯರ ಸಮಸ್ಯೆಗಳ ಸಂಬಂಧಪಟ್ಟಂತೆ ಇಂದು ಸಭೆ ನಡೆಸಲಾಗುವುದು. ಆಯುಷ್ ವೈದ್ಯರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆಗಳು ಇವೆ. ಎಂಬಿಬಿಎಸ್ ವೈದ್ಯರ ಸಮನಾಗಿ ಆಯುಷ್ ವೈದ್ಯರು ವೇತನ ಕೇಳುತ್ತಿದ್ದಾರೆ. ಈ ಬಗ್ಗೆ ಸಮಿತಿಯೊಂದನ್ನು ರಚಿಸಿ ವರದಿ ತರಿಸಿಕೊಳ್ಳಲಾಗುವುದು.  ಸಮಿತಿ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ. ಪ್ರಧಾನಿ ಮೋದಿಯವರು ಹೇಳಿದಂತೆ ಆಯುಷ್ ಚಿಕಿತ್ಸೆಗೆ ನಾವು ಹೆಚ್ಚು ಆದ್ಯತೆ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಮಾಗಡಿಯಲ್ಲಿ ಕೆಎಸ್ಆರ್‌ಟಿಸಿ ಚಾಲಕನಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ನಿಗಮದಿಂದ ಟೆಸ್ಟ್ ಮಾಡುವಂತೆ ಒತ್ತಾಯ ಬಂದಿದೆ. ಚಾಲಕನಿಗೆ ಕೊರೋನ ಬಂದಿದ್ದರಿಂದ ಅವರ ಜತೆ ಪ್ರಯಾಣಿಸಿದವರನ್ನು  ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ. ಅವರ ಸಿಬ್ಬಂದಿ ಮತ್ತು ಕುಟುಂಬ ವರ್ಗದವರಿಗೂ ಟೆಸ್ಟ್ ಮಾಡಲಾಗುವುದು. ರೆಡ್ ಮತ್ತು ಕಂಟೋನ್ಮೆಂಟ್ ಝೋನ್ ನಿಂದ ಬಂದು ಕೆಲಸ ಮಾಡುತ್ತಿರುವವರಿಗೂ, ಅವರ ಜತೆಗೆ ಸಂಪರ್ಕದಲ್ಲಿ ಇರುವವರಿಗೆ ಟೆಸ್ಟ್ ಮಾಡಲಾಗುವುದು ಎಂದರು.ಕೊರೋನ ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಟೆಸ್ಟ್ ಮಾಡಿಸಲು ಇಲಾಖೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಕೆಎಸ್ಆರ್‌ಟಿಸಿ ಸಿಬ್ಬಂದಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.