ನವದೆಹಲಿ, ಅ 12: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಂಡ ವಿವಿಧ ಕೇಂದ್ರ ಸರ್ಕಾರಿ ಸಂಸ್ಥೆಗಳು, ಜಿಲ್ಲಾ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಶುಕ್ರವಾರ ಕಾಯಕಲ್ಪ ಪ್ರಶಸ್ತಿ ಪ್ರದಾನ ಮಾಡಿದರು. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನನಗಳ ಸಂಸ್ಥೆ (ಏಮ್ಸ್) ಮೂರು ಕೋಟಿ ರೂ ನಗದು ಬಹುಮಾನ ಪಡೆದಿದೆ. ಪುದುಚೆರಿಯ ಜವಾಹರ್ ಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಒಂದೂವರೆ ಕೋಟಿ ರೂ ನಗದು ಬಹುಮಾನ ಪಡೆದಿದೆ. ಅಲ್ಲದೇ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮತ್ತು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ, ಭುವನೇಶ್ವರ ಏಮ್ಸ್ ಆಸ್ಪತ್ರೆಗಳಿಗೂ ಗುಣಮಟ್ಟದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿದುದಾಗಿ ಪುರಸ್ಕರಿಸಲಾಯಿತು.