ಫಾರ್ಮುಲಾ ಒನ್ ಋತು ಆರಂಭಕ್ಕೆ ಸಿದ್ಧತೆ

ಲಂಡನ್, ಜೂನ್ 30: ಪ್ರೇಕ್ಷಕರಿಲ್ಲದೆ ಫುಟ್ಬಾಲ್ ಪಂದ್ಯಾವಳಿಗಳು ಆರಂಭವಾದ ಬೆನ್ನಲ್ಲೆ, ಮತ್ತೊಂದು ಕ್ರೀಡೆಯ ಆರಂಭಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಈ ವಾರ ಫಾರ್ಮುಲಾ ಒನ್ ಆರಂಭವಾಗಲಿದ್ದು, ಆಸ್ಟ್ರಿಯಾದಲ್ಲಿ ಫಾರ್ಮುಲಾ ಒನ್ ಕಾರ್ ಗಳ ಓಡಾಟ ಶುರುವಾಗಲಿದೆ.ಕೊರೊನಾದಿಂದಾಗಿ ಫಾರ್ಮುಲಾ ಒನ್ ರೇಸ್ ಸಹ ಸ್ಥಗಿತಗೊಂಡಿತ್ತು. ಸುಮಾರು ನಾಲ್ಕು ತಿಂಗಳ ನಂತರ ಮರಳುತ್ತಿದೆ. ಆರು ಬಾರಿ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಫೆರಾರಿ ದಂತಕಥೆ ಮೈಕೆಲ್ ಷೂಮೇಕರ್ ಅವರ ಏಳು ಪ್ರಶಸ್ತಿಗಳ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.ಫಾರ್ಮುಲಾ ಒನ್ ಋತುವು ಮಾರ್ಚ್‌ನಲ್ಲಿ ಆಸ್ಟ್ರಿಯನ್ ಗ್ರ್ಯಾನ್ ಪ್ರಿಕ್ಸ್‌ನೊಂದಿಗೆ ಪ್ರಾರಂಭವಾಗ ಬೇಕಿತ್ತು. ಕೊರೊನಾದಿಂದ ಪ್ರಭಾವಿತವಾದ ಋತುವಿನಲ್ಲಿ ಬದಲಾವಣೆಗಳನ್ನು ಮಾಡಲು ಫಾರ್ಮುಲಾ ಒನ್ ಒಪ್ಪಿದೆ. ಆದರೆ, ಏಳು ರೇಸ್‌ಗಳು ರದ್ದಾಗಿರುವುದರಿಂದ ಈ ಋತುವಿನಲ್ಲಿ ಎಷ್ಟು ರೇಸ್‌ಗಳು ನಡೆಯಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಯುರೋಪಿನಲ್ಲಿ ಎಂಟು ರೇಸ್ ನಡೆಯಲಿವೆ, ಆದರೆ ಇವೆಲ್ಲವೂ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೆ ನಡೆಯಲಿವೆ.ಋತುವಿನ ಮೊದಲ ಫಾರ್ಮುಲಾ ಒನ್ ರೇಸ್ ಆಸ್ಟ್ರಿಯಾದಲ್ಲಿ ಭಾನುವಾರ ರೆಡ್ ಬುಲ್ ರಿಂಗ್‌ನಲ್ಲಿ ನಡೆಯಲಿದೆ ಮತ್ತು ಮುಂದಿನ ವಾರದಲ್ಲಿ ಎರಡನೇ ರೇಸ್ ಆಯೋಜಿಸುತ್ತದೆ.