ಬೆಂಗಳೂರು, ಮೇ 31, ರಸಗೊಬ್ಬರಗಳಿಗಾಗಲಿ, ಬಿತ್ತನೆ ಬೀಜಗಳಿಗಾಗಲಿ ಕೊರತೆಯಾಗದಂತೆ ಕೃಷಿಇಲಾಖೆ ಸಜ್ಜಾಗಿದೆ. ಈಗಾಗಲೇ ನಕಲಿ ಕಳಪೆ ಬಿತ್ತನೆಬೀಜ ಹಾವಳಿಯನ್ನು ತಡೆಗಟ್ಟುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ರೈತರಿಗೆ ಕೋವಿಡ್ ಲಾಕ್ ಡೌನ್ ನಲ್ಲಿಯೂ ಕೃಷಿ ಚಟುವಟಿಕೆಗಳಿಗೆ ನಿಯಮ ಸಡಿಲಿಸಿರುವುದು ಹೆಚ್ಚು ಅನುಕೂಲವಾಗಿದೆ.ಈ ಬಾರಿ ಮುಂಗಾರಿನಲ್ಲಿ 2.59 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.ಈ ಪೈಕಿ ಇದುವರೆವಗೆ ಶೇ.96ರಷ್ಟು ಅಂದರೆ 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಇನ್ನು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಕಟಾವು ಒಟ್ಟು 4.68 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಪ್ರತಿಯಾಗಿ ಇದುವರೆವರೆಗೆ 3 .90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.83ರಷ್ಟು ಬೆಳೆಗಳ ಕಟಾವಾಗಿರುತ್ತದೆ.ರಸಗೊಬ್ಬರಕ್ಕೆ ಒಟ್ಟು 5.87 ಲಕ್ಷ ಮೆ.ಟನ್ ಬೇಡಿಕೆ ಇದ್ದು, ಇದುವರೆಗೆ 4.79 ಲಕ್ಷ ಮೆ. ಟನ್ ಗೊಬ್ಬರ ಸರಬರಾಜಾಗಿದೆ. 7.27 ಲಕ್ಷ ಮೆ.ಟನ್ ನಷ್ಟು ದಾಸ್ತಾನಿದೆ.ಬಿತ್ತನೆ ಬೀಜಕ್ಕೆ ಒಟ್ಟು 1.22 ಲಕ್ಷ ಕ್ವಿಂಟಾಲ್ ಬೇಡಿಕೆಯಿದ್ದು, ಇದುವರೆಗೂ 0.25 ಲಕ್ಷ ಕ್ವಿಂಟಾಲ್ ನಷ್ಟು ವಿತರಣೆಯಾಗಿದ್ದು, 1.11 ಲಕ್ಷ ಕ್ವಿಂಟಾಲ್ ಗಳಷ್ಟು ದಾಸ್ತಾನಿರುತ್ತದೆ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು ಯಾವುದೇ ತೆರನಾದ ಕೊರತೆ ಇಲ್ಲ . ಇನ್ನು ಪಿಎಂ ಕಿಸಾನ್ ಯೋಜನೆಯಡಿ ರಾಜ್ಯದ 51,07,921 ರೈತರಿಗೆ ಆರ್ಥಿಕ ನೆರವು ವರ್ಗಾವಣೆಯಾಗಿದ್ದು, ವಿವಿಧ ಕಂತುಗಳಲ್ಲಿ ಅಂದರೆ 1ರಿಂದ 5ನೇ ಕಂತುವರೆಗೆ ಒಟ್ಟಾರೆ 3781.64 ಕೋಟಿ ರೂ. ಆರ್ಥಿಕ ನೆರವು ವರ್ಗಾವಣೆಯಾಗಿದೆ.2020-21 ನೇ ಸಾಲಿನಲ್ಲಿ 4824868 ರೈತರಿಗೆ ರೂ. 2000ದಂತೆ ಒಟ್ಟು ರೂ. 964.97 ಕೋಟಿ ರೂ. ಆರ್ಥಿಕ ನೆರವು ವರ್ಗಾವಣೆಯಾಗಿದೆ ಎಂದು "ಯುಎನ್‌ಐ" ಕನ್ನಡಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಈಗಾಗಲೇ ರಾಜ್ಯದ ಪೂರ್ವ ಮುಂಗಾರು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಹಾಸನ, ತುಮಕೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೃಷಿಚಟುವಟಿಕೆಗಳು ಆರಂಭವಾಗಿವೆ. ಮುಂಗಾರಿಗೆ ಜೋಳ, ಹೆಸರುಕಾಳು, ಉದ್ದು, ನೆಲಗಡಲೆ (ಶೇಂಗಾ) ಹಲಸಂದೆ, ಕೆಂಪುಬೇಳೆ, ಸೋಯಾಬಿನ್.
ಏಪ್ರಿಲ್ 1ರಿಂದ ಮೇ 29ರವರೆಗೆ ಬಿತ್ತನೆ ಬೀಜದ ವಿವರ ಹೀಗಿದೆ:
ರಾಜ್ಯಾದ್ಯಂತ ಒಟ್ಟು 902 ಕ್ವಿಂಟಾಲ್ ಬಿತ್ತನೆ ಜೋಳಕ್ಕೆ ಬೇಡಿಕೆಯಿದ್ದು, ಈ ಪೈಕಿ 207.87ಕ್ವಿಂಟಾಲ್ ಬಿತ್ತನೆ ಜೋಳ ಮಾರಾಟವಾಗಿದೆ.12.66 ಕ್ವಿಂಟಾಲ್ ದಾಸ್ತಾನು ಉಳಿದಿದೆ.1406 ಕ್ವಿಂಟಾಲ್ ಬಿತ್ತನೆ ಹೆಸರುಕಾಳಿಗೆ ಬೇಡಿಕೆಯಿದ್ದು, 2261.87 ಕ್ವಿಂಟಾಲ್ ಅಂದರೆ ಬೇಡಿಕೆ ಮೀರಿಯೂ ಮಾರಾಟವಾಗಿ, ಇನ್ನೂ 92.68ಕ್ವಿಂಟಾಲ್ ದಾಸ್ತಾನಿದೆ.907 ಕ್ವಿಂಟಾಲ್ ಉದ್ದು ಬೇಡಿಕೆಯಿತ್ತು.1004.15 ಕ್ವಿಂಟಾಲ್ ಅಗತ್ಯಕ್ಕಿಂತಲೂ ಹೆಚ್ಚಿನದಾಗಿ ಮಾರಾಟವಾಗಿಯೂ ಇನ್ನೂ 40.14 ಕ್ವಿಂಟಾಲ್ ದಾಸ್ತಾನು ಉಳಿದಿದೆ. 918 ಕ್ವಿಂಟಾಲ್ ಬಿತ್ತನೆ ಹಲಸಂದೆ ಬೀಜಕ್ಕೆ ಬೇಡಿಕೆಯಿತ್ತು. 1783.86 ಕ್ವಿಂಟಾಲ್ ಮಾರಾಟವಾಗಿದ್ದೂ ಇನ್ನೂ 390.02 ಕ್ವಿಂಟಾಲ್ ದಾಸ್ತಾನು ಉಳಿದಿದೆ.946 ಕ್ವಿಂಟಾಲ್ ಕೆಂಪು ಬೇಳೆಗೆ ಬೇಡಿಕೆಯಿತ್ತು. 232.31ಕ್ವಿಂಟಾಲ್ ಮಾರಾಟವಾಗಿ, ಈಗ 132.44ಕ್ವಿಂಟಾಲ್ ದಾಸ್ತಾನಿದೆ.ಇನ್ನೂ ನೆಲಗಡಲೆಗೆ 6896.39 ಕ್ವಿಂಟಾಲ್ ಬೇಡಿಕೆ ಪೈಕಿ 3975.8 ಕ್ವಿಂಟಾಲ್ ಮಾರಾಟವಾಗಿ, ಇನ್ನೂ 7614.4 ಕ್ವಿಂಟಾಲ್ ದಾಸ್ತಾನು ಶೇಖರಣೆಯಿದೆ. ಪ್ರಮುಖ ಎಣ್ಣೆಕಾಳಾದ ಸೂರ್ಯಕಾಂತಿಗೆ 2820 ಕ್ವಿಂಟಾಲ್ ಬೇಡಿಕೆಯಿತ್ತು. ಇದರಲ್ಲಿ 758.72 ಕ್ವಿಂಟಾಲ್ ಮಾರಾಟವಾಗಿ,91.74 ಕ್ವಿಂಟಾಲ್ ದಾಸ್ತಾನು ಉಳಿದಿದೆ.ಬೆಳಗಾವಿ, ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ ಈ ಜಿಲ್ಲೆಗಳಲ್ಲಿ ಪೂರ್ವ ಮುಂಗಾರಿಗೆ ಸೋಯಾಬೀನ್ ಬಿತ್ತನೆ ವಾಡಿಕೆಯಾಗಿದೆ. ಸೋಯಾಬೀನ್‌ಗೆ 107930.76 ಕ್ವಿಂಟಾಲ್‌ಗೆ ಬೇಡಿಕೆಯಿದ್ದು, ಈ ಪೈಕಿ 15388 ಕ್ವಿಂಟಾಲ್ ಮಾರಾಟವಾಗಿ 1034.55 ಕ್ವಿಂಟಾಲ್ ದಾಸ್ತಾನು ಇದೆ.ಮುಂಗಾರು ಕೇರಳ ಮೂಲಕ ಜೂನ್ 15 ಕ್ಕೆ ಕರ್ನಾಟಕ ಪ್ರವೇಶ ಮಾಡಲಿದೆ ಎಂದು ತಜ್ಞರು ತಿಳಿಸಿದ್ದು, ಒಟ್ಟಾರೆ ಮುಂಗಾರು ಹಂಗಾಮು ಕೃಷಿ ಸಿದ್ಧತೆ ನಡೆಸಿರುವ ಬಿತ್ತನೆಬೀಜ, ರಸಗೊಬ್ಬರದ ಪೂರೈಕೆ ಬಗ್ಗೆ ನಿಶ್ಚಿಂತೆಯಿಂದ ಇರುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.