ಔರಂಗಾಬಾದ್, ಅ.23: ಮರಾಠವಾಡ ಪ್ರಾಂತ್ಯದ 46 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಸಕಲ ತಯಾರಿ ನಡೆಸಲಾಗಿದೆ. ಅಕ್ಟೋಬರ್ 21ರಂದು ಈ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಈ ಪ್ರಾಂತ್ಯದ 46 ಕ್ಷೇತ್ರಗಳಲ್ಲಿ ಶೇಕಡಾ 66ರಷ್ಟುಮತದಾನವಾಗಿತ್ತು. 30 ಮಹಿಳೆಯರು ಸೇರಿದಂತೆ 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಔರಂಗಾಬಾದ್ ಪೂರ್ವ ಕ್ಷೇತ್ರದಲ್ಲಿ ಅತಿ ಹೆಚ್ಚು 34 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಹಣೆಬರಹ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದ್ದು, ನಾಳೆ ಪ್ರಕಟಗೊಳ್ಳಲಿದೆ. ಬಿಗಿ ಭದ್ರತೆಯಡಿ ಎಲ್ಲ ಕ್ಷೇತ್ರಗಳಲ್ಲಿ ಮತ ಎಣಿಕೆ ನಾಳೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಆರಂಭದಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಸಂಪೂರ್ಣ ಪ್ರಕ್ರಿಯೆ ಮಧ್ಯಾಹ್ನದೊಳಗೆ ಪೂರ್ಣಗೊಳ್ಳುವುದರಿಂದ ನಾಳೆ ಕೆಲವೇ ಗಂಟೆಗಳಲ್ಲಿ ಮುನ್ನಡೆ ಮತ್ತು ಹಿನ್ನಡೆಗಳ ಬಗ್ಗೆ ತಿಳಿಯಲಿದೆ. 2014ರಲ್ಲಿ, ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಬಿಜೆಪಿ 15 ಸ್ಥಾನಗಳನ್ನು ಗೆದ್ದಿದೆ, ನಂತರ ಶಿವಸೇನೆ 11, ಕಾಂಗ್ರೆಸ್ 9, ಎನ್ಸಿಪಿ 8 ಮತ್ತು ಇತರರು ಮೂರು ಸ್ಥಾನಗಳನ್ನು ಗಳಿಸಿದ್ದರು.
ಈ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ, ಕಾಂಗ್ರೆಸ್-ಎನ್ಸಿಪಿ ಮೈತ್ರಿಯಾಗಿ ಸ್ಪರ್ಧಿಸಿದರೆ, ಎಐಎಂಐಎಂ, ವಿಬಿಎ ಮತ್ತು ಬಿಎಸ್ಪಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ.