ಇಂದು ನಡೆಯುವ ಬಿವಿವಿಎಸ್ ಸಂಭ್ರಮ-ಮುಧೋಳ ಹಬ್ಬ ಆಚರಣೆಯ ಸಿದ್ದತೆ ಪೂರ್ಣ
ಮುಧೋಳ 01:ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿವಿವಿಎಸ್ ಸಂಭ್ರಮ ಆಚರಿಸಲಾಗುತ್ತಿದ್ದು ಪ್ರಥಮ ಹಂತದಲ್ಲಿ ಮುಧೋಳ, ದ್ವಿತೀಯ ಹಂತದಲ್ಲಿ ರಾಮದುರ್ಗ, ತೃತೀಯ ಹಂತದಲ್ಲಿ ಬಾಗಲಕೋಟೆಯಲ್ಲಿ ಆಚರಿಸಲಾಗುತ್ತಿದೆ ಎಂದು ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಹೇಳಿದರು.
ಬುಧವಾರ ಸಂಜೆ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜ.2 ರಂದು ಮುಧೋಳದಲ್ಲಿ ನಡೆಯಲಿರುವ ಬಿವಿವಿಎಸ್ ಸಂಭ್ರಮ-ಮುಧೋಳ ಹಬ್ಬವನ್ನು ತಾಲೂಕಾ ವ್ಯಾಪ್ತಿಯಲ್ಲಿ ಬರುವ ಸಂಘದ ಒಟ್ಟು 19 ಶಾಲಾ- ಕಾಲೇಜುಗಳು ಸೇರಿಕೊಂಡು ಈ ಕಾರ್ಯಕ್ರಮವನ್ನು ಬಾರಿ ಅದ್ದೂರಿ ಯಾಗಿ ಆಚರಿಸಲಾಗುತ್ತಿದ್ದು ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ, ಊಟದ ವೆವಸ್ಥೆ ಸೇರಿದಂತೆ ಇತರೆ ಎಲ್ಲ ರೀತಿಯ ವೆವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಅವರು ಮಾತನಾಡಿ ಜ.2 ರಂದು ಬೆಳಿಗ್ಗೆ 8.45ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಸಂಘದ ಒಟ್ಟು 19 ಶಾಲಾ -ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿವಿಧ ಕಲಾ ತಂಡಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ, ಬೆಳಿಗ್ಗೆ 11ಗಂಟೆಗೆ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ.ಪೂ. ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರು ಉದ್ಘಾಟಿಸುವರು, ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ಅವರು ಅಧ್ಯಕ್ಷತೆವಹಿಸುವರು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಉಪಸ್ಥಿತರಿರುವರು.
ಮಧ್ಯಾಹ್ನ 2 ಗಂಟೆಗೆ ಡಾ.ಗೀತಾ ಭರತ (ಉತ್ತೂರ) ಅವರು ಮಹಿಳೆಯರಿಗಾಗಿ ಆರೋಗ್ಯ ಕುರಿತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಎಸ್. ಹಿರೇಮಠ ಅವರು ದೇಶದ ಅಭಿವೃದ್ದಿಯಲ್ಲಿ ಶಿಕ್ಷಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡುವರು.
ಸಂಜೆ 3 ಗಂಟೆಗೆ ಸಂಘದ ವಿದ್ಯಾರ್ಥಿಗಳು ಹಾಗೂ ಕಲಾ ಶಿಕ್ಷಕರಿಂದ ರಾಗ-ಭಾವ-ರಂಗ , ಸಂಜೆ 4 ಗಂಟೆಗೆ ಆರ್.ಎಮ್.ಜಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಬೀಳೂರು ಗುರುಬಸವ ಮಹಾಸ್ವಾಮಿಗಳ ರೂಪಕ, ಸಂಜೆ 4.30ಕ್ಕೆ ಸಂಘದ ಮುಧೋಳದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 6ಕ್ಕೆ ಬೆಂಗಳೂರಿನ ಖ್ಯಾತ ಗಾಯಕ ಸುನೀಲ ಕೋಶಿ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯಲಿವೆ ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಂಘದ 19 ಶಾಲಾ-ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಎಲ್ಲ ವಿದ್ಯಾರ್ಥಿಗಳು ಹಾಗೂ ಸಂಘದ ಶಾಲಾ- ಕಾಲೇಜುಗಳ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರುಗಳು ಭಾಗವಹಿಸುವರು, ವಿದ್ಯಾರ್ಥಿಗಳ ಪಾಲಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಭ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದರು.
ಸಂಘದ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.