ತಲುಖ್ವಾನ್, ಮಾ 20, ಆಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ತಖಾರ್ ನಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿ ಇಬ್ಬರು ನಾಗರಿಕರು ಮತ್ತು ಆರು ತಾಲಿಬನ್ ಉಗ್ರರು ಸಾವನ್ನಪ್ಪಿದ್ದು, ಇತರ 22 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರಿ ವಕ್ತಾರರು ಶುಕ್ರವಾರ ಖಚಿತಪಡಿಸಿದ್ದಾರೆ.‘ಪ್ರಾಂತೀಯ ರಾಜಧಾನಿ ತಲುಖ್ವಾನ್ ಹೊರವಲಯದಲ್ಲಿರುವ ಚಿನ್ಜಾಯಿಯಲ್ಲಿ ಸ್ಥಳೀಯ ಕಾಲಮಾನ ಗುರುವಾರ ಸಂಜೆ 6.30 ಕ್ಕೆ ಸ್ಫೋಟ ಸಂಭವಿಸಿದೆ.’ ಎಂದು ವಕ್ತಾರ ಅಬ್ದುಲ್ ಖಲೀಲ್ ಆಸರ್ ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ವಾಹನ ದಟ್ಟಣೆಯ ಮುಖ್ಯ ರಸ್ತೆಯಲ್ಲಿ ಐಇಡಿ ಸಾಧನವನ್ನು ಹೂತಿಡುವ ಮುನ್ನ ತಾಲಿಬನ್ ಉಗ್ರರ ಗುಂಪು ಐಇಡಿ ಹೊತ್ತೊಯ್ಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಗಾಯಗೊಂಡವರಲ್ಲಿ ಮಕ್ಕಳು ಸೇರಿದಂತೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ನಾಗರಿಕರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಉಗ್ರರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ರಸ್ತೆಬದಿಯ ಬಾಂಬ್ ಮತ್ತು ನೆಲಬಾಂಬ್ ಗಳನ್ನು ತಯಾರಿಸಲು ಐಇಡಿಗಳನ್ನು ಬಳಸುತ್ತಿದ್ದಾರೆ. ಆದರೆ ಮಾರಕ ಐಇಡಿ ನಾಗರಿಕರ ಸಾವು-ನೋವಿಗೆ ಕಾರಣವಾಗುತ್ತಿದೆ. ಕಳೆದ ವರ್ಷ ಆಫ್ಘಾನಿಸ್ತಾನದಲ್ಲಿ ಐಇಡಿ ಸ್ಫೋಟದಿಂದ 800 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 2,330 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.