ಬೆಂಗಳೂರು, ಮೇ 10,ದಿನದಿಂದ ದಿನಕ್ಕೆ ಕೊರೊನಾ ತಂದೊಡ್ಡುತ್ತಿರುವ ಬಹುಮುಖಿ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ತಮ್ಮ ಆಚಾರ-ವಿಚಾರಗಳಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಕೊರೊನಾ ಕರ್ತವ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್ ಸಿಬ್ಬಂದಿ ಮತ್ತು ಪೌರ ಕಾರ್ಮಿಕರನ್ನು ಪುಷ್ಪಾರ್ಚನೆ ಮೂಲಕ ಗೌರವಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ, ಸಮುದಾಯ ಸ್ವಚ್ಛತೆಗೆ ಮಹತ್ವ ಕೊಡುವುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕೂಡಾ ಮುಖ್ಯ ಎಂಬುದನ್ನು ಮನಗಾಣಬೇಕು ಎಂದರು.
ಕೊರೊನಾ ಮೂರನೇ ಮಹಾಯುದ್ಧವಾಗಿದ್ದು, ಇಡೀ ವಿಶ್ವ ಇದರ ವಿರುದ್ಧ ಸಮರ ಸಾರುತ್ತಿದೆ. ಹೀಗಾಗಿ ನಾವೆಲ್ಲರೂ ಕೊರೊನಾಕ್ಕಿಂತ ಮುಂಚಿನ ದಿನಗಳು ಮತ್ತು ನಂತರದ ದಿನಗಳಿಗೆ ಹೋಲಿಕೆ ಆಗುವ ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎಂದರು.ಅವಿರತವಾಗಿ ಕೋವಿಡ್-19 ವಿರುದ್ಧ ಸಮರ ಸಾರುತ್ತಿರುವ ಕೊರೊನಾ ವಾರಿಯರ್ಸ್ ಗಳನ್ನು ಗೌರವಿಸುವುದನ್ನು ಕಲಿತಾಗ ಮಾತ್ರ ಮಹಾಮಾರಿಯ ವಿರುದ್ಧದ ಈ ವಿಶ್ವ ಯುದ್ಧದಲ್ಲಿ ಜಯಶಾಲಿಯಾಗಲೀ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸುಮಾರು 200ಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಲಾಯಿತು.ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಮತ್ತು ಸ್ಥಳೀಯ ಬಿಬಿಎಂಪಿ ಸದಸ್ಯೆ ದೀಪಾ ನಾಗೇಶ್ ಉಪಸ್ಥಿತರಿದ್ದರು.