ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಮೂಲಮಂತ್ರ: ಎಚ್‌.ಆರ್‌. ಲವಕುಮಾರ

Positive attitude is key to success: H.R. Lavakumar

ಉಗರಗೋಳ 13: ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಮೂಲಮಂತ್ರ. ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುವ ಜತೆಗೆ, ಯೋಜನಾಬದ್ಧವಾಗಿ ಶ್ರಮವಹಿಸಿ ದುಡಿದರೆ ಯಶಸ್ಸು ದೊರೆಯುವುದು ಖಚಿತ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಎಚ್‌.ಆರ್‌. ಲವಕುಮಾರ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ವಲಯದ ಕುರುವಿನಕೊಪ್ಪ ಗ್ರಾಮದಲ್ಲಿ ಬುಧವಾರ ರಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ 30 ಸದಸ್ಯರಿಗೆ ಉಚಿತವಾಗಿ ಮೂರು ತಿಂಗಳ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಸ್ವಉದ್ಯೋಗ ಕೈಗೊಂಡು, ಸ್ವಾವಲಂಬಿಯಾಗಿ ಬದುಕಬೇಕು ಎಂದು ಕರೆ ನೀಡಿದರು. 

ಧರ್ಮಸ್ಥಳ ಯೋಜನೆ ಜ್ಞಾನವಿಕಾಸ ಸಮನ್ವಯ ಅಧಿಕಾರಿ ನಿರ್ಮಲ ಕಳಸನಗೌಡರ ಮಾತನಾಡಿ,  ಜೀವನದಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಆಲೋಚಿಸಬೇಕು. ಶಿಸ್ತು, ಸಂಯಮ, ತಾಳ್ಮೆ, ಸಹನೆ ಮತ್ತು ಸಮಯಪ್ರಜ್ಞೆ ಗುಣಗಳನ್ನು ರೂಢಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು. 

ಸುಭ್ರಾಯ ನಾಯ್ಕ, ಒಕ್ಕೂಟದ ಅಧ್ಯಕ್ಷೆ ಸಿದ್ದವ್ವ ಇಂಗಳಗಿಮಠ, ಚಂದ್ರು ಉಪ್ಪಾರಟ್ಟಿ, ಮಮತಾ ವೈದ್ಯ, ಮಡಿವಾಳಪ್ಪ ತಳವಾರ, ರೇಖಾ ಪಾಟೀಲ, ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.