ಲಕ್ನೋ ಜ ೨೧: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಗೊಳಿಸುವ ಸಂಬಂಧ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಸಂಚಲನದ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಕಾನೂನು ಸೂಕ್ತ ಜಾರಿಗೊಳಿಸುವ ಅವಶ್ಯಕತೆಯಿದೆ ಎಂಬ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪ್ರತಿಪಾದನೆಗೆ ವಾಸಿಂ ರಿಜ್ವಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಶುಗಳಂತೆ ಹೆಚ್ಚು ಮಂದಿ ಮಕ್ಕಳನ್ನು ಹೆರುವುದು ದೇಶಕ್ಕೆ ಹಾನಿಕಾರಕ ಎಂದು ರಿಜ್ವಿ ಅಭಿಪ್ರಾಯಪಟ್ಟಿದ್ದಾರೆ.
ಕೆಲ ವ್ಯಕ್ತಿಗಳು ಸಂತಾನ ಸಹಜ ಪ್ರಕ್ರಿಯೆ. ಈ ವಿಷಯದಲ್ಲಿ ಯಾರೊಬ್ಬರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಪ್ರಾಣಿಗಳಂತೆ ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವುದು ಸಮಾಜ, ದೇಶಕ್ಕೆ ಹಾನಿಕರ ಎಂದು ರಿಜ್ವಿ ಹೇಳಿದ್ದಾರೆ.
ದೇಶದಲ್ಲಿ ಕೇವಲ ಇಬ್ಬರು ಮಕ್ಕಳನ್ನು ಮಾತ್ರ ಹೊಂದುವುದನ್ನು ಕಡ್ಡಾಯಗೊಳಿಸುವ ಯಾವುದೇ ಕಾನೂನನ್ನು ತಾವು ಬೆಂಬಲಿಸುತ್ತೇನೆ ಎಂಬ ಮೋಹನ್ ಭಾಗವತ್ ಅವರ ಅಭಿಪ್ರಾಯವನ್ನು ವಾಸಿಂ ರಿಜ್ವಿ ಬೆಂಬಲಿಸಿದ್ದಾರೆ.