ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಪಾಂಡಿಚೇರಿ ವಿಧಾನಸಭೆ ನಿರ್ಣಯ ಅಂಗೀಕಾರ

ಪಾಂಡಿಚೇರಿ, ಫೆ.12 :    ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರುದ್ಧ ಬುಧವಾರ ಕರೆಯಲಾಗಿದ್ದ ಪಾಂಡಿಚೇರಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗಿದೆ.

ನಿರ್ಣಯ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ ಎಂದು ಸ್ಪೀಕರ್ ವಿ.ಪಿ.ಸಿವಕೊಲುಂಧು ಅವರು ಸದನದಲ್ಲಿ ಪ್ರಕಟಿಸಿದರು.

ನಿರ್ಣಯ ಅಂಗೀಕಾರಗೊಳ್ಳುವಾಗ ವಿರೋಧ ಪಕ್ಷ ಸದಸ್ಯರು ಗೈರಾಗಿದ್ದರು.

ಇದಕ್ಕೂಮೊದಲು ನಿರ್ಣಯ ಮಂಡಿಸಿದ ನಾರಾಯಣಸ್ವಾಮಿ ಅವರು ನಿರ್ಣಯ ಪರವಾಗಿ ಮಾತನಾಡಿದರು. ಎನ್‌ಆರ್‌ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಕೂಡ ಸಿಎಎ ಅನ್ನು ವಿರೋಧಿಸುತ್ತಿವೆ. ಆದರೂ ಅವರು ಯಾಕಾಗಿ ಕಲಾಪ ಬಹಿಷ್ಕರಿಸಿದ್ದಾರೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ಸಿಎಎ, ಎನ್‌ಪಿಆರ್, ಎನ್‌ಆರ್‌ಸಿಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈಗಾಗಲೇ ಕೇರಳ, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳು ನಿರ್ಣಯ ಅಂಗೀಕರಿಸಿವೆ.