ಶಿವಸೇನೆ, ಎನ್ ಸಿ ಪಿ, ಕಾಂಗ್ರೆಸ್ ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಮುಂಬೈ, ನ 11 :      ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿ ಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡಲಿದೆಯೇ?    ಬಿಜೆಪಿ ಸರ್ಕಾರ ರಚನೆಗೆ ಆಸಕ್ತಿ ತೋರದ ಕಾರಣ, ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದು ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸರ್ಕಾರ ರಚನೆಯ ಸಂಬಂಧ ಶಿವಸೇನೆಯ ನಾಯಕ  ಸಂಜಯ್ ರಾವತ್ ಇಂದು ಮುಂಬೈ ಮತ್ತು ದೆಹಲಿಯಲ್ಲಿ ಕ್ರಮವಾಗಿ ಶರದ್ ಪವಾರ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ.    ಸರ್ಕಾರ ರಚನೆಯ ಸಂಬಂಧ ಸೋಮವಾರ ಸಂಜೆ 7.30 ರೊಳಗೆ ಶಿವಸೇನೆ ತನ್ನ ಅಭಿಪ್ರಾಯವನ್ನು ರಾಜ್ಯಪಾಲರಿಗೆ ತಿಳಿಸಬೇಕಾಗಿದೆ.    ಮೂರೂ ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಶಿವಸೇನೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದೋ ಇಲ್ಲವೋ ಎಂಬುದು ರಾತ್ರಿಯ ವೇಳೆಗೆ ಸ್ಪಷ್ಟವಾಗಲಿದೆ.    ಈ ನಡುವೆ ಶಿವಸೇನೆಗೆ ಬೆಂಬಲ ನೀಡಬೇಕಾದಲ್ಲಿ ಬಿಜೆಪಿಯ ಸಂಬಂಧವನ್ನು ಮುರಿದುಕೊಂಡು ಹೊರಬರಬೇಕು ಎಂದು ಎನ್ ಸಿ ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿಗಿಪಟ್ಟು ಹಾಕಿವೆ. ಒಂದು ವೇಳೆ ಶಿವಸೇನೆ, ಎನ್ ಸಿ ಪಿ ಮತ್ತು ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡುವುದೇ ಆದಲ್ಲಿ, ಕೇಂದ್ರದಲ್ಲಿ ಶಿವಸೇನೆಯ ವತಿಯಿಂದ ಮಂತ್ರಿಯಾಗಿರುವ ಅರವಿಂದ್ ಸಾವಂತ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.