ಅಹಮದಾಬಾದ್, ಜ 23 : ಪಟಿದಾರ್ ಮೀಸಲಾತಿ ಹೋರಾಟ ಸಮಿತಿಯ ಮಾಜಿ ಸಂಚಾಲಕ, ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಸಬರಮತಿ ಕೇಂದ್ರೀಯ ಕಾರಾಗೃಹದಿಂದ ಬಿಡುಗಡೆಗೊಂಡ ಕೂಡಲೇ ಅವರನ್ನು ಗುರುವಾರ ಪೊಲೀಸರು ಮರು ಬಂಧಿಸಿದ್ದಾರೆ.
ತಾಂತ್ರಿಕ ಕಾರಣದಿಂದ ಬುಧವಾರ ಹಾರ್ದಿಕ್ ಪಟೇಲ್ ಕಾರಾಗೃಹದಿಂದ ಬಿಡುಗಡೆಗೊಳ್ಳಲು ಸಾಧ್ಯವಾಗಿರಲಿಲ್ಲ, ಗುರುವಾರ ಜೈಲಿನಿಂದ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಜೈಕಾರದ ಘೋಷಣೆ ನಡುವೆಯೇ ಗಾಂಧಿನಗರದ ಮನ್ಸಾದಲ್ಲಿ ಶಾಂತಿ ಭಂಗ ಉಂಟುಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಅವರನ್ನು ಮತ್ತೆ ಬಂಧಿಸಿದರು. ಮುಂದಿನ ಕ್ರಮ ಕೈಗೊಳ್ಳಲು ಅಲ್ಲಿಂದ ಕರೆದೊಯ್ದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
2017ರ ಸರ್ಕಾರಿ ಆದೇಶ ಉಲ್ಲಂಘಿಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉತ್ತರ ಗುಜರಾತ್ ಪಟಾನ್ ಜಿಲ್ಲೆಯ ಸಿದ್ಧಾಪುರ್ ಗೆ ಹಾರ್ದಿಕ್ ಪಟೇಲ್ ಅವರನ್ನು ಕರೆದೊಯ್ಯಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಪ್ರಕರಣಗಳಲ್ಲಿ ಜಾಮೀನು ಸಹಿತ ವಿವಿಧ ಕಲಂಗಳಡಿ ಹಾರ್ದಿಕ್ ಅವರನ್ನು ಬಂಧಿಸಲಾಗಿದ್ದು ಅವರಿಗೆ ಜಾಮೀನು ದೊರೆಯುವ ಸಾಧ್ಯತೆಯಿದ್ದು, ನಂತರವಷ್ಟೇ ಅವರು ಬಿಡುಗಡೆಯಾಗುವ ಸಾಧ್ಯತೆಯಿದೆ.
2015ರ ಆಗಸ್ಟ್ 25ರಂದು ಇಲ್ಲಿನ ಜಿಡಿಎಂಸಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪಟಿದಾರ್ ಮೀಸಲಾತಿ ಸಮಾವೇಶ ನಡೆಸಿದ ನಂತರ ನಡೆದ ವ್ಯಾಪಕ ಹಿಂಸಾಚಾರ ಸಂಬಂಧ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸಂಬಂಧ ಠಾಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಈ ಹಿನ್ನೆಲೆ ಅಹಮದಾಬಾದ್ ನ ಪೊಲೀಸರು, ಪಟೇಲ್ ರನ್ನು ವೀರಂಗಂ ಗ್ರಾಮದಲ್ಲಿ ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದರು ಅಹಮದಾಬಾದ್ ಸೆಷನ್ಸ್ ಕೋರ್ಟ್, ಹಾರ್ದಿಕ್ ಪಟೇಲ್ ಗೆ ಈ ತಿಂಗಳ 24ರ ವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು.