ಎರಡನೇ ಪಂದ್ಯಕ್ಕೆ ಚಾಹಲ್, ಕುಲ್ದೀಪ್ ಇಬ್ಬರನ್ನೂ ಆಡಿಸಿ: ಹರಭಜನ್ ಸಿಂಗ್

ಆಕ್ಲೆಂಡ್, ಫೆ 7, ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್‌ ಸ್ಪಿನ್ನರ್‌ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.ಕಳೆದ ಬುಧವಾರ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 348 ರನ್ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡ ರಾಸ್ ಟೇಲರ್ ಶತಕದ ನೆರವಿನಿಂದ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಸೋಲಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

ಅಂದಿನ ಪಂದ್ಯದಲ್ಲಿ ಯಜ್ವೇಂದ್ರ ಚಾಹಲ್ ಕಣಕ್ಕೆ ಇಳಿದಿರಲಿಲ್ಲ. ಕುಲ್ದಿಪ್‌ ಎರಡು ವಿಕೆಟ್‌ ಪಡೆದಿದ್ದರು. ಆದರೆ, 84 ರನ್ ಬಿಟ್ಟುಕೊಟ್ಟಿದ್ದರು. ಭಾರತದ ಬೌಲರ್‌ಗಳ ಪೈಕಿ ಕುಲ್ದೀಪ್‌ ಅತ್ಯಂತ ದುಬಾರಿಯಾಗಿದ್ದರು.ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿರುವ ಭಜ್ಜಿ ಖ್ಯಾತಿಯ ಹರಭಜನ್ ಸಿಂಗ್, " ಎರಡನೇ ಏಕದಿನ ಪಂದ್ಯದಲ್ಲಿ ಯಜ್ವೇಂದ್ರ ಚಾಹಲ್‌ ಹಾಗೂ ಕುಲ್ದೀಪ್‌ ಯಾದವ್ ಇಬ್ಬರೂ ಆಡಬೇಕು,'' ಎಂದು ಸಲಹೆ ನೀಡಿದ್ದಾರೆ. "ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಯಾವುದೇ ದಿನ- ಯಾರ ಮೇಲಾದರೂ ವೇಗದ ಬೌಲರ್‌ಗಳಿಗೆ ಸಮರ್ಥವಾಗಿ ಎದುರಿಸುತ್ತಾರೆ. ಆದರೆ, ಸ್ಪಿನ್‌ ಬೌಲಿಂಗ್‌ನಲ್ಲಿ ಕೊಂಚ ತಡಕಾಡುತ್ತಾರೆ. ಸ್ಪಿನ್‌ ದಾಳಿಯ ಮೂಲಕ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳನ್ನು ಕಬಳಿಸುವ ಸಾಧ್ಯತೆ ಇದೆ. ಹಾಗಾಗಿ, ಯಜ್ವೇಂದ್ರ ಚಾಹಲ್‌ ಮತ್ತು ಕುಲ್ದೀಪ್‌ ಯಾದವ್‌ ಅವರಿಬ್ಬರನ್ನು ಅಂತಿಮ 11 ರಲ್ಲಿ ನೋಡಬಯಸುತ್ತೇನೆ,'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.