ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಯೋಜನೆಗೆ ಬಿ.ಎಸ್. ಯಡಿಯೂರಪ್ಪ ಅಧಿಕೃತ ಚಾಲನೆ

ಬೆಂಗಳೂರು, ಜೂ 2 , ಕೋವಿಡ್  - 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಚಾಲನೆ ನೀಡಿದರು.ಇದೆ ವೇಳೆ ಪೌರಾಡಳಿತ, ತೋಟಗಾರಿಕೆ ಹಾಗೂ  ರೇಷ್ಮೆ ಇಲಾಖೆ ಸಚಿವರ ನೂರುದಿನಗಳ ಸಾಧನೆಯ 64 ಪುಟಗಳ ಪುಸ್ತಕವನ್ನು ಮುಖ್ಯಮಂತ್ರಿ  ಯಡಿಯೂರಪ್ಪ ಬಿಡುಗಡೆ ಮಾಡಿದರು.  ಗೃಹ  ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.12735 ಹೆಕ್ಟೇರ್ ನಲ್ಲಿ  ಹೂವು ಬೆಳೆದ ರೈತರಿಗೆ ಪರಿಹಾರವಾಗಿ 31.83 ಕೋಟಿ ರೂ. ಪರಿಹಾರವನ್ನು ಸರ್ಕಾರ  ಘೋಷಿಸಿತ್ತು, ಇಂದು ಪರಿಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ   ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಸಚಿವ ಡಾ. ನಾರಾಯಣಗೌಡ, ಗೃಹ ಸಚಿವ ಬೊಮ್ಮಾಯಿ, ಕೃಷಿ  ಸಚಿವ ಬಿ.ಸಿ.ಪಾಟೀಲ್, ಕಂದಾಯ ಸಚಿವ ಆರ್ ಅಶೋಕ್ ಮತ್ತಿತರು ಉಪಸ್ಥಿತರಿದ್ದರು.ನೂರು  ದಿನಗಳ ಸಾಧನೆ ಪುಸ್ತಕದಲ್ಲಿ, ಕೋವಿಡ್-19 ಸಂದರ್ಭದಲ್ಲಿ ರೈತರಿಗೆ ನೆರವಾದ  ವಿಚಾರಗಳನ್ನು ವಿವರಿಸಲಾಗಿದೆ. ಮೂರು ಇಲಾಖೆ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮದ ಬಗ್ಗೆ  ತಿಳಿಸಲಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ರೇಷ್ಮೆ ಬೆಳೆಗಾರರಿಗೆ ಸರಕಾರ ಘೋಷಿಸಿದ  ಅನುದಾನದ ವಿವರವನ್ನು ನೀಡಲಾಗಿದೆ.  

50083 ಹೆಕ್ಟೇರ್ ನಲ್ಲಿ ತರಕಾರಿ ಹಾಗೂ 41053  ಹೆಕ್ಟೇರ್ ನಲ್ಲಿ ಹಣ್ಣು ಬೆಳೆದ ರೈತರಿಗೆ 137 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ.  ಪೌರಾಡಳಿತ ಇಲಾಖೆ ಅಡಿ ರಾಜ್ಯಾದ್ಯಂತ ಕೋವಿಡ್-19 ಸಂದರ್ಭದಲ್ಲಿ ಕೈಗೊಂಡ ಕ್ರಮದ ಬಗ್ಗೆ  ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ರೈತರಿಗೆ ಹೆಚ್ಚಿನ ನೆರವು ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಖಾತೆಗೆ ಆನ್‌ ಲೈನ್‌ ಮೂಲಕ ಹಣ ಹಾಕುವ  ಕೆಲಸ ಇಂದಿನಿಂದಲೇ ಪ್ರಾರಂಭವಾಗಿದೆ. 15-20 ದಿನಗಳಲ್ಲಿ ಎಲ್ಲ ಅರ್ಹ ರೈತರ ಖಾತೆಗೆ ಹಣ  ತಲುಪಲಿದೆ. ಕೋವಿಡ್ -19ನಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ  ಸರ್ಕಾರ ಹೆಚ್ಚಿನ ನೆರವು ನೀಡಿದೆ. ಮುಖ್ಯಮಂತ್ರಿಗಳು ದಿನ ನಿತ್ಯ 16 ಗಂಟೆ ಕೆಲಸ  ಮಾಡುತ್ತಿದ್ದಾರೆ. ಅವರಂತೆ ಸಚಿವರೆಲ್ಲರೂ ಅವಿರತ ಶ್ರಮಿಸುತ್ತಿದ್ದಾರೆ ಎಂದರು.ಅಲ್ಲದೆ ಮಂಡ್ಯ  ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ 18 ಕೋಟಿ ರೂ.ಗೂ ಹೆಚ್ಚು ಹಣ  ನೀಡಿದ್ದೇವೆ. ಆದರೆ ಜಿಲ್ಲೆಯ ಶಾಸಕರಿಗೆ ನೇರವಾಗಿ ಅನುದಾನ ನೀಡಲು ಸಾಧ್ಯವಿಲ್ಲ.  ಜಿಲ್ಲಾಡಳಿತದ ಮೂಲಕ ಎಲ್ಲ ತಾಲೂಕಿಗೂ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ಸಚಿವರು  ತಿಳಿಸಿದ್ದಾರೆ.  ಜೆಡಿಎಸ್  ಭದ್ರಕೋಟೆಯನ್ನು ಒಡೆಯುವ ಸಲುವಾಗಿ ಹಾಸನಕ್ಕೆ ಜಿಲ್ಲಾ ಉಸ್ತುವಾರಿಯಾಗಿ ಸಚಿವ ಬಿ. ಗೋಪಾಲಯ್ಯರನ್ನು ನೇಮಿಸಲಾಗಿದೆಯೇ  ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಸಚಿವರು, ಜೆಡಿಎಸ್ ಭದ್ರಕೋಟೆ ಈಗಾಗಲೆ ಛಿದ್ರವಾಗಿದೆ. ಆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಉತ್ತರಿಸಿದರು.