ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆದರಿಕೆ: ನಂಜನಗೂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ

ಮೈಸೂರು, ಮಾ.31,ಸಾರ್ವಜನಿಕರೊಂದಿಗೆ ನಿಷ್ಠುರವಾಗಿ ವರ್ತಿಸಿ ಇಲಾಖೆಗೆ ಕೆಟ್ಟ ಹೆಸರು ತಂದ ಮೈಸೂರಿನಬ ನಂಜನಗೂಡು ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಯಾಸ್ಮಿನ್ ತಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಮಹಿಳಾ ಪಿಎಸ್‌ಐ ಯಾಸ್ಮಿನ್ ತಾಜ್  ಅವರು ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದಲ್ಲಿನ ಪೆಟ್ರೋಲ್ ಬಂಕ್‌ನ್ನು  ಬಲವಂತವಾಗಿ ಮುಚ್ಚುವಂತೆ ಸೂಚಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿತ್ತು.ವರ್ಗಾವಣೆಗೊಳಿಸಿರುವ  ಪಿಎಸ್‌ಐ  ಯಾಸ್ಮಿನ್ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ, ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ  ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ  ನಿನ್ನೆ ಸಂಜೆ ನಂಜನಗೂಡು ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಯಾಸ್ಮಿನ್ ತಾಜ್  ಆಗಮಿಸಿ ಸ್ಥಳದಲ್ಲಿದವರಿಗೆ  ನಮ್ಮ ಗಾಡಿಗೆ ನೀನು ಪೆಟ್ರೋಲ್ ಹಾಕದಿದ್ದರೆ,  ಪೆಟ್ರೋಲ್ ಬಂಕ್‌ನ್ನು ಬೆಂಕಿ ಹಚ್ಚಿ ಸುಟ್ಟುಬಿಡುತ್ತೀನಿ ಎಂದು ಆವಾಜ್ ಹಾಕಿದ್ದರು. ಇದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಅವಾಜ್  ಹಾಕಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಲವಂತವಾಗಿ ಬಂಕ್ ಮುಚ್ಚುವಂತೆ  ಬೆದರಿಸಿರುವ ಮಹಿಳಾ ಪಿಎಸ್‌ಐ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆ  ಮಾಹಿತಿ ಪಡೆದುಕೊಂಡು ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಪರಿಶೀಲನೆ ನಡೆಸಿ  ಕೂಡಲೇ ಯಾಸ್ಮಿನ್ ಅವರನ್ನು ವರ್ಗಾವಣೆ ಮಾಡಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿಯೂ ದೇವಸ್ಥಾನದ ಅರ್ಚಕರೊಬ್ಬರಿಗೆ ಲಾಠಿ ಬೀಸಿದ್ದ ಪೊಲೀಸ್ ಪೇದೆಯನ್ನು ಕೂಡ ಅಮಾನತುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.