ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ತರಗತಿ ಆದೇಶ ರದ್ಧತಿಗೆ ಮನವಿ
ಹಾವೇರಿ 16 : ಎಸ್ಸೆಸ್ಸೆಲ್ಸಿ ಪರೀಕ್ಷೆ -1ರಲ್ಲಿ ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ತರಗತಿಗಳನ್ನು ಮೇ 15 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನೀಡಿರುವ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಸಹಶಿಕ್ಷಕರ ಸಂಘದ ಸಹಯೋಗದಲ್ಲಿ ಸರ್ಕಾರಕ್ಕೆ ಡಿಡಿಪಿಐ ಮುಖಾಂತರ ಮನವಿ ಸಲ್ಲಿಸಲಾಯಿತು.
ಶಿಕ್ಷಣ ಇಲಾಖೆಯು ರಜಾ ಸಹಿತ ಇಲಾಖೆಯಾಗಿದ್ದರೂ, ಮೇ 7ರ ವರೆಗೂ ಎಲ್ಲಾ ಶಿಕ್ಷಕರು ಚುನಾವಣೆ ಕರ್ತವ್ಯ, ಬಿಎಲ್‌ಓ ಮಷ್ಟರಿಂಗ, ಸೇರಿದಂತೆ ಹಲವು ಕರ್ತವ್ಯ ನಿರ್ವಹಿಸಲಾಗಿದೆ. ಅದಕ್ಕೂ ಪೂರ್ವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯ ಮಾಡಿದ್ದು, ಇದೀಗ ರಜೆ ಸಿಕ್ಕಿದ್ದು, ಹಲವಾರು ವೈಯಕ್ತಿಕ ಕೆಲಸ, ವೈದ್ಯಕೀಯ ಉಪಚಾರ, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಬಿರು ಬೇಸಿಗೆಯಲ್ಲಿ ತರಗತಿ ನಡೆಸಲು ಆದೇಶ ಮಾಡಿರುವದು ಅವೈಜ್ಞಾನಿಕವಾಗಿದೆ. ಅಲ್ಲದೇ ಪದವಿ ಪೂರ್ವ ಉಪನ್ಯಾಸಕರಿಗೆ ಇಲ್ಲದ ಆದೇಶ ಕೇವಲ ಪ್ರೌಢ ಶಾಲಾ ಶಿಕ್ಷಕರಿಗೆ ಏಕೆ ಎಂಬ ತಾರತಮ್ಯ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಕೂಡಲೇ ಈ ಆದೇಶ ರದ್ದು ಪಡಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಮಾಧ್ಯಮಿಕ ಸಂಘ ದ ಅಧ್ಯಕ್ಷ ಹೆ.ಪಿ. ಬಣಕಾರ, ಸಹ ಶಿಕ್ಷಕರ ಸಂಘ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಎನ್. ಎನ್. ಕುಂದೂರು, ರಾಕೇಶ್ ಜಿಗಳಿ, ರಮೇಶ ಮಲ್ಲಾಡದ, ಸುರೇಶ ಕಲ್ಮನಿ, ಎಸ್. ಡಿ. ಪರಡ್ಡಿ, ರವಿ ಇಟಗಿ, ವಿ. ರವಿ, ಬಸವರಾಜ ಮೆಡ್ಲೇರಿ, ಎಂ. ಎಸ್. ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.