ಮುಡಾ ಪ್ರಕರಣ: 6ರಂದು ಅರೆಬೆತ್ತಲೆ ಮೆರವಣಿಗೆ
ಜಮಖಂಡಿ 31: ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗಪಡಿಸಿಕೊಂಡು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ದುರ್ಬಲಗೊಳಿಸಲು, ಚುನಾಯಿತ ಸರ್ಕಾರ ಪತನಗೊಳಿಸಲು ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯು ಜಿಲ್ಲಾ ನವನಗರದಲ್ಲಿ ನ.6 ರಂದು ಬೆಳಗ್ಗೆ 11.30ಕ್ಕೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದೆಂದು ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದರು.
ನಗರದ ರಮಾನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನವನಗರದ ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಎಫ್ಐಆರ್ ಆಗಿರುವ ಕಾರಣಕ್ಕೆ ರಾಜೀನಾಮೆ ನೀಡಬೇಕೆಂದು ಮಾನದಂಡ ನಿಗದಿಪಡಿಸಿದರೆ ಸಿದ್ದರಾಮಯ್ಯ ಮಾತ್ರವಲ್ಲ, ನರೇಂದ್ರ ಮೋದಿ ಅವರ ಸಂಪುಟದ 23-24 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಕೇಂದ್ರ ಸರಕಾರ ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ರಾಜಭವನಗಳ ಮೂಲಕ ಮಟ್ಟಹಾಕಲು ಪ್ಯೂಡಲ್ ರಾಜಕಾರಣ ದೇಶದಲ್ಲಿ ನಡೆದಿದೆ. ಆದರೆ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯನವರ ಸರಕಾರ ನಿರ್ಗಮಿಸುವುದು ಎಂದರೆ ಈ ಸಮಾಜದ ಬಹುಜನರ ವಿಚಾರಧಾರೆ ಸೋಲು ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ರವಿ ಕಾಂಬಳೆ, ಕಾಶಿಂಅಲಿ ಗೋಠೆ, ಮಹಾಲಿಂಗಪ್ಪ ಆಲಬಾಳ, ಸದಾಶಿವ ಐನಾಪೂರ, ಬಸವರಾಜ ದೊಡಮನಿ, ಮಾರುತಿ ಚಿಕ್ಕಾಲಗುಂಡಿ, ಹುಲ್ಲಪ್ಪ ಅಂಟರಟಾನ, ಅಪಾಸಿ ಕಾಂಬಳೆ, ಶ್ರಾವಣ ನಿಡೋಣಿ, ಯಾಶೀನ ಲೋದಿ ಸೇರಿದಂತೆ ಅನೇಕರು ಇದ್ದರು.