ಬೆಳಗಾವಿಯಲ್ಲಿ ತಡರಾತ್ರಿ ಕಳೆಗಟ್ಟಿದ ಕನ್ನಡ ಹಬ್ಬದ ಸಂಭ್ರಮ : ಕೆಕ್ ಕತ್ತರಿಸಿ ಸಂಭ್ರಮಿಸಿದ ಕನ್ನಡಿಗರು

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಕನ್ನಡಿಗರು ಕೆಕ್ ಕತ್ತರಿಸುವ ಮೂಲಕ ಕನ್ನಡದ ಹಬ್ಬವನ್ನು ಬರಮಾಡಿಕೊಂಡರು. 


     ಗುರುವಾರ ತಡರಾತ್ರಿ ಸಾವಿರಾರು ಕನ್ನಡಿಗರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿ ನಗರದ ಚೆನ್ನಮ್ಮ ವೃತ್ತದಲ್ಲಿ ಕೆಕ್ ಕತ್ತರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಬರಮಾಡಿಕೊಂಡು ಕುಣಿದು ಕುಪ್ಪಳಿಸಿದರು. 


   ಇದರಿಂದ ನಾಡಹಬ್ಬ ರಾಜ್ಯೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಂತಾಗಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವಾರು ಗ್ರಾಮಗಳಿಂದ ಕನ್ನಡಿಗರು ಹೆಚ್ವಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕನ್ನಡ ಹಬ್ಬವನ್ನು ಸ್ವಾಗತಿಸಿಕೊಂಡರು. 


  ಇದರಿಂದ ಬೆಳಗಾವಿ ನಗರದಲ್ಲಿ ಗುರುವಾರ ರಾತ್ರಿಯಿಂದಲೆ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಶುಕ್ರವಾರ ಬೆಳಿಗ್ಗೆಯಿಂದ ರೂಪಕಗಳ ಮೆರವಣಿಗೆಯು ಪ್ರಾರಂಭವಾಗಿ ಶನಿವಾರ ಬೆಳಗಿನ ವರೆಗೆ ರೂಪಕಗಳ ಮೆರವಣಿಗೆ ನಡೆಯಲಿದೆ. 


  ಬೆಳಗಾವಿ ನಗರವು ಮಧುವನಗಿತ್ತಿಯಂತೆ ಸಿಂಗಾರಗೊಂಡಿದ್ದು, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ಈ ಕನ್ನಡದ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಚುರುಕಾಗಿ ಕಾರ್ಯ ಮಾಡುತ್ತಿದ್ದಾರೆ.