ಚೆನ್ನೈ, ಜ ೨೧: ಸಾಮಾಜಿಕ ಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ವಿರುದ್ದ ತಾವು ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲಿ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.
“ತುಘಲಕ್” ನಿಯತಕಾಲಿಕೆಯಲ್ಲಿ ತಾವು ಓದಿದ ಸುದ್ದಿಯನ್ನು ಆಧರಿಸಿ ಪೆರಿಯಾರ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ.
ಪೆರಿಯಾರ್ ಬಗ್ಗೆ ರಜನಿಕಾಂತ್ ನೀಡಿರುವ ಹೇಳಿಕೆ ಸಂಬಂಧ ರಾಜಕೀಯ ಪಕ್ಷವೊಂದು ಸೂಪರ್ ಸ್ಟಾರ್ ವಿರುದ್ದ ಚೆನ್ನೈ ಪೊಲೀಸರಿಗೆ ದೂರು ನೀಡಿದೆ.
ತಮಿಳು ನಿಯತಕಾಲಿಕೆ “ತುಘಲಕ್” ೫೦ ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ರಜನೀಕಾಂತ್, ೧೯೭೧ ರಲ್ಲಿ ಸೇಲಂ ನಲ್ಲಿ ಭಗವಾನ್ ಶ್ರೀ ರಾಮ ಹಾಗೂ ಸೀತಾ ದೇವಿಯ ನಗ್ನ ಚಿತ್ರಗಳೊಂದಿಗೆ ನಡೆದಿದ್ದ ಮೂಢನಂಬಿಕೆ ವಿರೋಧಿ ಸಮಾವೇಶದಲ್ಲಿ ಪೆರಿಯಾರ್ ಭಾಗವಹಿಸಿದ್ದರು. ಆದರೆ, ಈ ಸುದ್ದಿಯನ್ನು ಅಂದಿನ ಯಾವುದೇ ಪತ್ರಿಕೆಗಳು ಪ್ರಕಟಿಸಲಿಲ್ಲ. ಆದರೆ, ತುಘಲಕ್ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಚೋ ರಾಮಸ್ವಾಮಿ ಮಾತ್ರ ಈ ಸುದ್ದಿಯನ್ನು ಪ್ರಕಟಿಸಿ, ಅದನ್ನು ಖಂಡಿಸಿದ್ದರು ಎಂದು ರಜನಿಕಾಂತ್ ಸ್ಮರಿಸಿದ್ದರು.
ತುಘಲಕ್ ಪತ್ರಿಕೆ ಪ್ರಕಟಿಸಿದ್ದ ಸುದ್ದಿ ಅಂದಿನ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತ್ತು. ಪತ್ರಿಕೆಯ ಪ್ರತಿಗಳನ್ನು ಸರ್ಕಾರಿ ಅಧಿಕಾರಿಗಳು ಮುಟ್ಟುಗೋಲುಹಾಕಿಕೊಂಡಾಗ, ಚೋ ರಾಮಸ್ವಾಮಿ ಪತ್ರಿಕೆಯನ್ನು ಮರುಮುದ್ರಿಸಿ ಬಿಡುಗಡೆ ಮಾಡಿದ್ದರು, ನಿಯತಕಾಲಿಕೆ ಪ್ರತಿಗಳು ಬಿಸಿ ಕೇಕ್ ಮಾರಾಟವಾಗಿದ್ದವು ಎಂದು ರಜನೀಕಾಂತ್ ಹೇಳಿದ್ದರು. ಪೆರಿಯಾರ್ ಕುರಿತು ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂಬ ದ್ರಾವಿಡರ್ ವಿಡುತಲೈ ಕಳಗಂ (ಡಿವಿಕೆ) ಪಕ್ಷದ ಬೇಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ “ತುಘಲಕ್” ಪತ್ರಿಕೆಯಲ್ಲಿನ ಸುದ್ದಿಯ ಆಧಾರದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ರಜನಿಕಾಂತ್ ಕ್ಷಮೆಯಾಚಿಸದಿದ್ದರೆ, ಚಿತ್ರ ಮಂದಿರಗಳಲ್ಲಿ ಪ್ರದರ್ಶಗೊಳ್ಳುತ್ತಿರುವ ಅವರು ನಟಿಸಿರುವ “ದರ್ಬಾರ್” ಚಿತ್ರಕ್ಕೆ ಗೆ ಅಡ್ಡಿಪಡಿಸುವುದಾಗಿ ಡಿವಿಕೆ ಪಕ್ಷ ಎಚ್ಚರಿಕೆ ನೀಡಿದೆ.