ಲೋಕದರ್ಶನ ವರದಿ
ಬಿಸಿಲಿನ ಪ್ರಖರತೆಗೆ ಬಸವಳಿದ ಜನರು : ತಂಪುಪಾನಿಯ ಮೊರೆ
ಕಂಪ್ಲಿ 02: ಬಿರು ಬಿಸಿಲಿಗೆ ಬಸವಳಿದ ಜನರು ತಂಪು ಪಾನಿಯ ಸೇರಿದಂತೆ ತಾಳೆಹಣ್ಣಿನ ಮೊರೆ ಹೋಗಿರುವುದು ಕಂಡು ಬಂತು. ಬಳ್ಳಾರಿ ಜಿಲ್ಲೆಯ ಗಣಿನಾಡು ಎಂಬ ಪ್ರಖ್ಯಾತಿ ಹೊಂದಿರುವ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಮೈಸುಡುವ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಈ ಉಷ್ಣಾಂಶದಿಂದ ತಪ್ಪಿಸಿಕೊಳ್ಳಲು ಜನರು ತಂಪು ಪಾನಿಯ ಕಡೆಗೆ ಮುಖ ಮಾಡಿದ್ದಾರೆ. ಹೌದು. ಬಿರು ಬಿಸಿಲಿನ ಪ್ರಖರತೆಗೆ ಭಸವಳಿದ ಸಾರ್ವಜನಿಕರಿಗೆ ತಂಪನ್ನು ನೀಡುವ ತಾಳೆ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಬೆಲೆ ಮಾತ್ರ ದುಬಾರಿಯಾಗಿದೆ. ಆದರೂ, ದೇಹಕ್ಕೆ ತಂಪು ನೀಡುವ ತಾಳೆಹಣ್ಣನ್ನು ಸಾರ್ವಜನಿಕರು ಖರೀದಿಸುತ್ತಿದ್ದಾರೆ. ಬಿರುಬಿಸಿಲಿನಿಂದಾಗಿ ತಾಳೆ ಹಣ್ಣಿಗೆ ಬೇಡಿಕೆ ಅಧಿಕವಾಗಿದ್ದು, ವಿಜಯನಗರ ಜಿಲ್ಲೆಯ ಕಂಪ್ಲಿ ಸಮೀಪದ ಬುಕ್ಕಸಾಗರ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಿಂದ ತಂದಿರುವ ತಾಳೆ ಹಣ್ಣನ್ನು ಬಿರುಸಿನಿಂದ ಮಾರಾಟ ಮಾಡುತ್ತಿದ್ದಾರೆ. ಕಂಪ್ಲಿ ತಾಲ್ಲೂಕಿನ ರಾಮಸಾಗರ, ಬುಕ್ಕಸಾಗರ ಸೇರಿದಂತೆ ತುಂಗಭದ್ರಾ ನದಿ ತೀರದಲ್ಲಿ ನೈಸರ್ಗಿಕವಾಗಿ ಬೆಳೆದ ತಾಳೆ ಮರಗಳಿಂದ ತಾಳೆಹಣ್ಣು ಕಿತ್ತು ತಂದು ಮಾರಾಟ ಮಾಡುವುದು ಕಂಡು ಬರುತ್ತಿದೆ. ಬೇಸಿಗೆ ಕಾಲ ಆರಂಭವಾದರೂ ಸಹಿತ ಬೆಳಗಿನ ಜಾವ ಇಬ್ಬನಿ ಬೀಳುತ್ತಿರುವುದರಿಂದ ತಾಳೆಹಣ್ಣಿನ ಇಳುವರಿ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಈ ಭಾಗದಲ್ಲಿ ಚಿರತೆಗಳ ಹಾವಳಿ ಇರುವುದರಿಂದ ಬೆಳಗಿನ ಜಾವದಲ್ಲಿ ತಾಳೆಹಣ್ಣು ಕೀಳುವುದು ದುಸ್ತರವಾಗಿದೆ. ಪ್ರಾಣದ ಭಯದಲ್ಲಿಯೇ ತಾಳೆಹಣ್ಣನ್ನು ಕಿತ್ತು ತರಬೇಕಿದೆ. ಇನ್ನು ಈ ಭಾಗದಲ್ಲಿ ಕಾಡು ಪ್ರಾಣಿಗಳಿಂದಾಗಿ ಕಾಡಿಗೆ ಹೋಗುವುದು ಅಸಾಧ್ಯವಾಗಿರುವುದರಿಂದ ದೂರದ ಹಗರಿಬೊಮ್ಮನಹಳ್ಳಿಯಿಂದ ತಾಳೆಹಣ್ಣನ್ನು ತರುತ್ತಿರುವುದರಿಂದ ಒಂದು ಹಣ್ಣನ್ನು 25 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಸಿಂಪಡಣೆ ಇಲ್ಲದ ನೈಸರ್ಗಿಕವಾಗಿ ಬೆಳೆಯುವ ತಾಳೆಹಣ್ಣು ಓಷಧಿಯ ಗುಣ ಹೊಂದಿದೆ. ಜೊತೆಗೆ ತಾಳೆಹಣ್ಣು ಹಣ್ಣಾಗಲು ಯಾವುದೇ ರಾಸಾಯನಿಕದ ಸ್ಪರ್ಷವಿಲ್ಲದೆ ಹಣ್ಣಾಗುತ್ತಿರುವುದರಿಂದ ಹಾಗೂ ಬಿಸಿಲ ಸಮಯದಲಲಿ ದೇಹಕ್ಕೆ ತಂಪನ್ನು ನೀಡುವ ಹಣ್ಣಾಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಾಗಿದೆ. ಆಟೋ, ತಳ್ಳುಬಂಡಿ ಬಾಡಿಗೆ, ಸ್ಥಳದ ಜಕಾತಿ ಕಳೆದು ನಮಗೆ ದಿನಕ್ಕೆ 200 ರಿಂದ 300 ರೂಗಳ ಉಳಿತಾಯವಾಗುತ್ತದೆ ಎಂದು ಕಂಪ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ತಾಳೆಹಣ್ಣು ಮಾರಾಟ ಮಾಡುವ ಬುಕ್ಕಸಾಗರದ ರಾಜಾ, ಮೈಲಾರಿ, ಪ್ರಭು, ರಾಜೇಶ್ ಮತ್ತು ಮಹೇಶ್ ತಿಳಿಸಿದರು.
ಕಂಪ್ಲಿ ನದಿಯತ್ತ ಮುಖ ಮಾಡಿದ ಪಕ್ಷಿಗಳ ಹಿಂಡು : ಈಗಾಗಲೇ ಸೂರ್ಯನ ಪ್ರಖರತೆ ಹೆಚ್ಚಾಗಿದ್ದು, ಇದರಿಂದ ನೀರಿನ ಅಭಾವವು ಕೂಡ ಹೆಚ್ಚಾಗಿದ್ದು, ನದಿ ಕೆಳ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾದ ಹಿನ್ನಲೆ ಸಾಕಷ್ಟು ಪಕ್ಷಿಗಳು ಮೇಲ್ಭಾಗದ ಕಂಪ್ಲಿ ನದಿ ಕಡೆಗೆ ಹಿಂಡು ಹಿಂಡಾಗಿ ಧಾವಿಸುತ್ತಿವೆ. ಇಲ್ಲಿನ ನದಿಯಲ್ಲಿ ನೀರು ಇರುವುದರಿಂದ ನೀರಿನ ದಾಹ ನೀಗಿಸುವುದು ಅನುಕೂಲವಾಗಿದ್ದು, ಪಕ್ಷಿಗಳಿಗೆ ನೀರುಣಿಸುವ ಕೆಲಸವನ್ನು ಗಂಗಾದೇವಿ ಮಾಡುತ್ತಿದ್ದಾರೆ ಎನ್ನುವಂತಾಗಿದೆ.
ಯುವ ಮುಖಂಡ ಸಿ.ಡಿ.ರಾಜಶೇಖರ ಮಾತನಾಡಿ, ಈ ಬಾರಿಯ ಬೇಸಿಗೆಯಲ್ಲಿ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು, ವೃದ್ಧರಿಗೆ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳುವುದು ದೊಡ್ಡ ತಲೆನೋವಾಗಿದೆ. ಉಳ್ಳವರು ಎಸಿಯಲ್ಲಿ ಇರುತ್ತಾರೆ. ಇಲ್ಲದವರು ಏನು ಮಾಡಬೇಕು. ಆಗಾಗಿ ಮನೆಯಲ್ಲೇ ಇದ್ದುಕೊಂಡು ಬೇಸಿಗೆಯ ದಿನಗಳನ್ನು ಕಳೆಯುವಂತಾಗಿದೆ. ಯುಗಾದಿ ಉಗಿ ಉಗಿ ಎನ್ನುವಂತಾಗಿದೆ ಬಿಸಿಲಿನ ಪ್ರಖರತೆ. ಹೊಸ ಮಳೆಗಳು ಬಂದರೆ, ಭೂಮಿ ತಾಯಿ ತಂಪಾಗುತ್ತಾಳೆ. ಮತ್ತು ಜನರು ಉಷ್ಣಾಂಶದಿಂದ ತಪ್ಪಿಸಿಕೊಳ್ಳಲು ತಾಳೆಹಣ್ಣು, ಜ್ಯೂಸ್ ಸೇರಿದಂತೆ ತಂಪುಪಾನಿಗಳನ್ನು ಸೇವಿಸುತ್ತಿದ್ದಾರೆ ಎಂದರು.