ಖುಂಟಿ, ಡಿ 3 -ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ಕಾಂಗ್ರೆಸ್ ಹಾಗೂ ಖಾರ್ಖಂಡ್ ಮುಕ್ತಿ ಮೋರ್ಚಾದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶವನ್ನು ಲೂಟಿ ಮಾಡುವುದೊಂದೇ ಅವರ ಉದ್ದೇಶವಾಗಿದ್ದು, ಅದಕ್ಕಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿನ ಬಿರ್ಸಾ ಕಾಲೇಜು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಹಾಗೂ ಜೆಎಂಎಂ ನ ಇತಿಹಾಸ ಹಾಗೂ ಕೃತ್ಯಗಳನ್ನು ಅರಿತಿರುವ ಜನರು ಆ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಎರಡೂ ಪಕ್ಷಗಳು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿವೆ. ಅವರಿಗೆ ಕೈಗಾರಿಕೋದ್ಯಮ ಮತ್ತು ಅಭಿವೃದ್ಧಿ ಬೇಕಿಲ್ಲ. ಏಕೆಂದರೆ ಜನರ ಕೈಯಲ್ಲಿ ಹಣ ಓಡಾಡಲಾರಂಭಿಸಿದರೆ ಅವರನ್ನು ಪರಿಗಣಿಸುವುದಿಲ್ಲ ಎಂಬ ಸತ್ಯ ವಿಪಕ್ಷಗಳಿಗೆ ತಿಳಿದಿದೆ ಎಂದು ಲೇವಡಿ ಮಾಡಿದರು.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಎದುರಾಳಿಗಳು ಹಬ್ಬಿಸುತ್ತಿರುವ ವದಂತಿಗಳನ್ನು ಸುಳ್ಳು ಎಂದು ಸಾಬೀತುಪಡಿಸಬೇಕು ಎಂದು ಮನವಿ ಮಾಡಿದರು.
ಮೊದಲ ಹಂತದ ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ. ಇದು ಜನರು ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ನಂಬಿಕೆಗಳಿಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಮಾವೋವಾದಿಗಳ ಬೆನ್ನು ಮೂಳೆ ಮುರಿದಿದೆ. ಇದರಿಂದ ಶಾಪಮುಕ್ತವಾಗಿರುವ ರಾಜ್ಯ ಇನ್ನು ಮುಂದೆ ಅಭಿವೃದ್ಧಿಯತ್ತ ಮುಖ ಮಾಡಲಿದೆ ಎಂದರು.
ವಿಪಕ್ಷಗಳು ಸೋಲನ್ನು ತಪ್ಪಿಸಿಕೊಳ್ಳಲು ಮತದಾನ ಮಾಡದಂತೆ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸ ಲುಯತ್ನಿಸಿದರು. ಆದರೆ ಜನರು ಅವರನ್ನು ತಿರಸ್ಕರಿಸಿದ್ದಾರೆ. ಜನರು ಬಿಜೆಪಿಯ ಮೇಲೆ ವಿಶ್ವಾಸವಿಟ್ಟಿದ್ದು, ಅದನ್ನು ಪಕ್ಷ ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.