“ಗಜಲ್ ಗಮಲು”
ಹಾರಿಬಿಡು ಬಿಳಿ ಪಾರಿವಾಳಗಳ ಊರ ತುಂಬಾ ಪೀರ
ಧರ್ಮಮುದ್ರೆಗಳೊಡೆದು ದಾರಿ ರೂಪಿಸುವುದೆಂತಾ ಚೆಂದ
ಧರ್ಮಗಳ ಗೊಡವೆಯಿಲ್ಲದ ದಾರಿ ಸೃಷ್ಟಿಯಾಗಬೇಕೆಂದರೆ ಈ ನೆಲದ ಮೇಲೆ ಮನುಷ್ಯತ್ವದ ಬೆರಗು ಅರಳಿ ನಿಲ್ಲಬೇಕು. ಶಾಂತಿಯ ಪಾರಿವಾಳಗಳು ಎಲ್ಲೆಡೆ ಹಾರಾಡಬೇಕು ಎಂಬ ತುಂಬು ಹಂಬಲವನ್ನು ವ್ಯಕ್ತಪಡಿಸುವ ಈ ಗಜಲ್ ಸಾಲುಗಳು ಕವಿ ಪೀರಸಾಬ ನದಾಫ ಅವರದು. ಕರ್ನಾಟಕ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಥೆ, ಕವಿತೆ, ಗಜಲ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆ ಮತ್ತು ಗಜಲ್ ವಾಚನ ಮಾಡಿದ್ದಾರೆ. ‘ಮನಸು ಮೋಜಿನ ಕುದುರಿ’ ಕವನ ಸಂಕಲನ, ‘ಫಾತಿಮಾ ಮತ್ತು ತಲ್ಲಾಖ್’ ಕಥಾ ಸಂಕಲನ, ‘ಪೀರ ಹಾರಿಬಿಡು ಪಾರಿವಾಳ’ ಗಜಲ್ ಸಂಕಲನ, ‘ಜೀವನ ಪ್ರೀತಿ ಆತ್ಮದೃಷ್ಟಿ’ ಲೇಖನ ಸಂಕಲನ ಇವರ ಪ್ರಕಟಿತ ಸಂಕಲನಗಳಾಗಿವೆ. ಅನೇಕ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ವಿಶ್ವಗುರು ಬಸವಶ್ರೀ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಬೆಳಕು ರಾಜ್ಯಮಟ್ಟದ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ಕಲಾನಾವಿಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸಮ್ಮಾನಗಳು ಇವರ ಸಾಹಿತ್ಯ ಮತ್ತು ಸಮಾಜ ಸೇವೆಗೆ ಒಲಿದು ಬಂದಿವೆ. ‘ಪೀರ ಹಾರಿಬಿಡು ಪಾರಿವಾಳ’ ಎಂಬ ಗಜಲ್ ಸಂಕಲನದಿಂದ ಆಯ್ದ ಒಂದು ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ.
ಗಜಲ್
ಜೀವನದಿ ಏನಾದರಾಗು ನಿನ್ನತನವನು ಮರೆಯಬೇಡ
ಜಗದಿ ನಿನ್ನಂತೆ ನೀನಾಗು ನಿನ್ನಿರುವನು ಮರೆಯಬೇಡ
ಅವನು ಇವನು ಇನ್ಯಾರಾದರೂ ಏನೇ ಮಾತಾಡಲಿ
ಮನಸ್ಸಿನಲ್ಲಿರುವ ಸ್ನೇಹ ಭಾವನೆಯನು ಮರೆಯಬೇಡ
ಹೃದಯ"ದು ಪ್ರೀತಿ ಮತ್ತು ಸ್ನೇಹಕ್ಕೆ ಬೇಗ ಸೋಲುತ್ತೆ
"ನ ಬದುಕು ಹತ್ತಿಕ್ಕುತ್ತೆ ಬುದ್ಧಿಯನು ಮರೆಯಬೇಡ
ಜಗದ ಜೀವನದೊಳಗೆ ಪಕ್ಕಾ ಅಂತಾ ಯಾವುದೂ ಇಲ್ಲ
ನಿನ್ನನುಭವದಿ ಕಾಸಿ ಸೋಸುವುದನು ಮರೆಯಬೇಡ
ಅಲ್ಲೊಂದು ಮಲ್ಲಿಗೆ ಇಲ್ಲೊಂದು ಗುಲಾಬಿ ಘಮ ಘಮ
ಹೋಲಿಕೆ ಸಲ್ಲ ಮರುಕದಿ ನಿನ್ನೊಳಗನು ಮರೆಯಬೇಡ
ಪೀರ ಪ್ರತಿ ಆತ್ಮದಲ್ಲೂ ಪರಮಾತ್ಮನಿರುವನು ಜಾಗೃತ
ನಾನಾರೂಪ ಮನಸೆಳೆವ ಆಹ್ಲಾದತೆಯನು ಮರೆಯಬೇಡ
- ಪೀರಸಾಬ ನದಾಫ
‘ಇದು ಬಾಳು ನೋಡು ಅರಿತೆನೆಂದರೂ ಅರಿತ ಧೀರನಿಲ್ಲ, ಹಲವುತನದ ಮೈಮರೆಸೋವಾಟವಿದು ನಿಜವು ತೋರದಲ್ಲ’ ಎಂದು ಕವಿಗಳು ಹೇಳಿದ್ದಾರೆ. ಬದುಕನ್ನು ಬಂದಂತೆ ಸ್ವೀಕರಿಸುವುದನ್ನು ಕಲಿಯಬೇಕು. ಇಲ್ಲಿ ಯಾವುದೂ ಸ್ಥಿರವಲ್ಲ. ಬದುಕಿನಲ್ಲಿ ನಾವು ಬೇಡುವ ಎಲ್ಲವೂ ಸಿಗುವುದಿಲ್ಲ, ಬೇಡವೆಂದು ನಿರಾಕರಿಸಿದ್ದು ನಮ್ಮ ಬಳಿ ಬಂದೇ ಬರುತ್ತದೆ. ಖುಷಿ ಒಮ್ಮೆ ಕೈಹಿಡಿದರೆ, ದುಃಖ ಹೆಗಲೇರಿ ನಗುತ್ತದೆ. ಎಲ್ಲಕ್ಕೂ ಎದೆಯೊಡ್ಡಿಕೊಂಡೇ ನಿಲ್ಲಬೇಕು, ನನಗಾಗದು ಎಂದು ಕೈ ಚೆಲ್ಲಿದೆಯೋ ಪಾತ್ರ ಕೊನೆಯಾದಂತೆ. ಬೆನ್ನಹಿಂದೆ ಚೂರಿ ಹಾಕುವವರು, ಬಿದ್ದಾಗ ಎಬ್ಬಿಸಿ ನೇವರಿಸುವವರು, ಮುಂದೆ ಇದ್ದಾಗ ಹೊಗಳಿ ಅಟ್ಟಕ್ಕೇರಿಸವವರು, ಮರೆಯಾದಾಗ ಹಿಯಾಳಿಸಿ, ಗೇಲಿ ಮಾಡಿ ಹಲ್ಲು ಕಿಸಿಯುವವರು ಎಲ್ಲರೂ ಬದುಕಿನ ದಾರಿಯಲ್ಲಿ ಇದಿರಾಗುತ್ತಲೇ ಇರುತ್ತಾರೆ. ಹಾಗಂತ ನಮ್ಮತನವನ್ನು ಯಾವತ್ತಿಗೂ ಕಳೆದುಕೊಳ್ಳದೆ, ಚಿಲ್ಲರೆ ಮಾತುಗಳಿಗೆ ಎದೆಗುಂದದೆ ಸಮಚಿತ್ತನಾಗಿದ್ದರೆ ನಡಿಗೆ ಸಲೀಸು. ಇಲ್ಲದಿರೆ ಬಾಳುವೆ ನಿತ್ಯ ನರಕದ ಯಾತನೆ. ಹೀಗೆಂದೇ ಬದುಕಿನ ನಾನಾಮುಖಗಳನ್ನು ಬಣ್ಣಿಸುವುದರ ಜೊತೆಗೆ ಈ ಬದುಕನ್ನು ಹೇಗೆ ಬದುಕಬೇಕು ಎಂಬುದರ ಕುರಿತು ಪೀರಸಾಬ ನದಾಫ ಅವರ ಗಜಲ್ ಅರ್ಥೈಸುತ್ತದೆ.
‘ಏನಾದರಾಗು ಮೊದಲು ಮಾನವನಾಗು’ ಎಂದರು ಕವಿ ಸಿದ್ಧಯ್ಯ ಪುರಾಣಿಕ ಅವರು. ಪೀರಸಾಬ ನದಾಫ ಅವರೂ ಕೂಡ ಜೀವನದಲ್ಲಿ ನೀನು ಏನಾದರೂ ಆಗು ಆದರೆ ನಿನ್ನತನವನ್ನು ಮರೆಯಬೇಡ ಎಂದು ಕಿವಿಮಾತು ಹೇಳುತ್ತಾರೆ. ‘ನಿನ್ನ ನೀನು ಮರೆತರೇನು ಸುಖವಿದೆ, ತನ್ನತನವ ತೊರೆದರೇನು ಸೊಗಸಿದೆ?’ ಎಂಬ ಹಳೆಯ ಹಾಡಿನ ಸಾಲು ನಮ್ಮನ್ನು ಕಾಡಿದಂತೆ ಇಲ್ಲಿನ ಗಜಲ್ ಸಾಲುಗಳೂ ನಮ್ಮನ್ನು ಕಾಡತೊಡಗುತ್ತವೆ. ನೀನು ಏನು ಆಗಬೇಕು ಎಂದು ನಿರ್ಧರಿಸಿದ್ದೀಯೋ ಅದರಂತೆಯೇ ಆಗು ಆದರೆ ನಿನ್ನಿರುವಿಕೆ ಮಾತ್ರ ಮರೆಯಬೇಡ. ಹೆಜ್ಜೆ ಹೆಜ್ಜೆಗೂ ನಿನ್ನನ್ನೇ ಗುರಿಯಾಗಿಸಿಕೊಂಡು ಮಾತಿನ ಬಾಣಗಳು ಎದೆಗೇ ನುಗ್ಗುತ್ತವೆ. ಎಲ್ಲಕ್ಕೂ ತಾಳ್ಮೆಯೊಂದೇ ಉತ್ತರವಾಗಲಿ, ಸ್ನೇಹದ ಹಸ್ತ ಸದಾ ಚಾಚಿಕೊಂಡಿರಲಿ. ಪ್ರೀತಿ ಮತ್ತು ಸ್ನೇಹದ ಮೂಲಕವೇ ಬಾಳನ್ನು ಕಟ್ಟಿಕೊಳ್ಳಬೇಕು. ಹೀನ ವಿಚಾರಗಳ ಕೈಯಲ್ಲಿ ಬುದ್ಧಿಯನು ಕೊಡಬೇಡ ಮನಸು ಮಲೀನವಾಗುತ್ತದೆ. ಇಲ್ಲಿ ಯಾರೂ ಪರಿಪೂರ್ಣರಲ್ಲ, ಹಾಗಂತ ಎಲ್ಲರನ್ನೂ ಒಪ್ಪಿಕೊಳ್ಳಬೇಕಿಲ್ಲ. ನಿನ್ನ ಅನುಭವದ ಒರೆಗಲ್ಲಿಗೆ ಹಚ್ಚಿ ಒಳಿತನ್ನು ಮಾತ್ರ ನಿನ್ನದಾಗಿಸಿಕೊಳ್ಳು. ಎಲ್ಲ ಹೂಗಳು ಸುವಾಸನೆ ಬೀರಬೇಕೆಂದೇನಿಲ್ಲ, ಅಲ್ಲೊಂದು, ಇಲ್ಲೊಂದು ಘಮ ಚೆಲ್ಲುತ್ತವೆ. ಹಾಗಂತ ಎಲ್ಲರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ನಿನ್ನೊಳಗಿನ ಸತ್ವಕ್ಕೆ ಬೆಲೆ ಕೊಡುವುದನ್ನು ಮರೆಯಬೇಡ. ದೇವರು ಒಳಿತು ಮಾಡುವವರ ರೂಪದಲ್ಲಿ ಸದಾ ಜೀವಂತವಾಗಿರುತ್ತಾನೆ. ಕಾಣುವ ಒಳಗಣ್ಣನ್ನು ಮಾತ್ರ ಎಂದಿಗೂ ಮುಚ್ಚಬೇಡ ಎಂದು ತಿಳಿ ಹೇಳುವ ಈ ಗಜಲ್ ಇಷ್ಟವಾಗುತ್ತದೆ.
‘ಪೀರ’ ಎಂಬ ಕಾವ್ಯನಾಮದ ಮೂಲಕ ಗಜಲ್ ಬರೆಯುವ ಪೀರಸಾಬ ನದಾಫ ಬದುಕಿನರ್ಥ ಕಾಣಿಸುವ, ಸದಾ ಒಳಿತನ್ನೇ ಧೇನಿಸುವ ಗಜಲ್ ಮೂಲಕ ಗಮನ ಸೆಳೆಯುತ್ತಾರೆ. ಕವಿಗೆ ನಮನಗಳು.
ನಾಗೇಶ್ ಜೆ. ನಾಯಕ
ಶಿಕ್ಷಕರು
ಮೊ. 9900817716
- * * * -