ಮುಂಬೈ, ಅ 24: ಮಹಾರಾಷ್ಟ್ರ ರಾಜಕಾರಣದಲ್ಲಿ ಹಳೆ ಹುಲಿ, ಮಾಜಿ ಮುಖ್ಯಮಂತ್ರಿ, ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ತಮ್ಮ ರಾಜೀಯ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ವಿಧಾನಸಭಾ ಚುನಾವಣಾ ಫಲಿತಾಂಶಗಳಿಂದ ಸ್ಪಷ್ಟವಾಗಿ ಗೋಚರಿಸಿದೆ. ಈ ಬಾರಿ ಕಾಂಗ್ರೆಸ್ ಮತ್ತು ಎನ್ ಸಿ ಪಿ ಮೈತ್ರಿ ನಿರೀಕ್ಷಿತ ಫಲಕೊಟ್ಟಿದ್ದು 90 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದು ಶರದ್ ಪವಾರ್ ಅವರ ರಾಜಕೀಯ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. 2004 ರ ಚುನಾವಣೆಗೂ ಮುನ್ನ ಕಾಂಗ್ರೆಸ್ - ಎನ್ ಸಿ ಪಿ ಮೈತ್ರಿ ಒಪ್ಪಂದ ಮಾಡಿಕೊಂಡಿತ್ತು. ಆಗಿನ ಚುನಾವಣೆಯಲ್ಲಿ ಎನ್ ಸಿ ಪಿ 71 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 69 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಪಕ್ಷದಿಂದ ವಿಲಾಸ್ ರಾವ್ ದೇಶ್ ಮುಖ್ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. 42 ಮಂದಿ ಸಚಿವ ಸಂಪುಟದಲ್ಲಿ ಆಗ ಎನ್ ಸಿ ಪಿ ಗೆ 24 ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್ ಸಿ ಪಿ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶರದ್ ಪವಾರ್ ಅವರಿಗೆ ಇನ್ನೂ ರಾಜಕೀಯವಾಗಿ ಜನಪ್ರಿಯತೆ ಇದೆ, ಅವರನ್ನು ಅಷ್ಟು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದು ಕೂಡ ಚುನಾವಣಾ ಫಲಿತಾಂಶಗಳಿಂದ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.