ಬೆಂಗಳೂರು, ಮಾ.26, ಖ್ಯಾತ ತೆಲುಗು ನಟ ಪವನ್ ಕಲ್ಯಾಣ್ ಕೊರೊನಾ ಸೋಂಕಿನ ವಿರುದ್ಧದ ಸಮರಕ್ಕೆ ಕೈಜೋಡಿಸಿದ್ದು, ಹಣಕಾಸಿನ ನೆರವಿನ ಹಸ್ತ ನೀಡಲು ಮುಂದೆ ಬಂದಿದ್ದಾರೆ.ಕೊರೊನಾ ಸೋಂಕು ತಡೆಗಟ್ಟಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಪವನ್ ಕಲ್ಯಾಣ್ ತಿಳಿಸಿದ್ದಾರೆ.ಅಲ್ಲದೇ, ಇದರ ಜೊತೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ನೀಡುವುದಾಗಿ ಅವರು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲು ನಾನು ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಲಿದ್ದೇನೆ. ಅವರ ಅದ್ವಿತೀಯ ಹಾಗೂ ಸ್ಫೂರ್ತಿದಾಯಕ ನಾಯಕತ್ವದಿಂದ, ಖಂಡಿತ ನಮ್ಮ ದೇಶ ಕೊರೊನಾ ಸೋಂಕನ್ನು ಮೆಟ್ಟಿ ನಿಲ್ಲುತ್ತದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.