ಬೆಂಗಳೂರು, ಆ 10 ಮಂತ್ರಿಮಂಡಲವಿಲ್ಲದಿದ್ದರೂ ಪಕ್ಷದ ಶಾಸರೆಲ್ಲ ಸಚಿವರಂತೆ ಕೆಲಸ ಮಾಡುತ್ತಿದ್ದು, ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ ನೆರೆಪರಿಹಾರ ಕಾರ್ಯದಲ್ಲಿ ಎಳ್ಳಷ್ಟು ಕೊರತೆಯಾಗಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಪ್ರವಾಹಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ, ನಷ್ಟ, ಪರಿಹಾರ ಕಾರ್ಯ, ಅನುದಾನ ಸೇರಿದಂತೆ ಹಲವು ಮಹತ್ತರ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಯಡಿಯೂರಪ್ಪ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ತಾವೊಬ್ಬರೇ ಇರಬಹುದು, ಸಚಿವರು ಇಲ್ಲದೆಯೇ ಪರಿಹಾರ ಕಾರ್ಯಗಳನ್ನು ಸಮರ್ಪವಾಗಿ ನಿಭಾಯಿಸಲಾಗುತ್ತಿದೆ. ಯಾವುದೇ ತೊಂದರೆಯಾಗದಂತೆ ಪರಿಹಾರ, ಪುನರ್ವಸತಿ ಕಾರ್ಯ ಕೈಗೊಳ್ಳಲಾಗಿದೆ. ಕೇಂದ್ರದಿಂದ ಅಗತ್ಯ ನೆರವು ಸಿಕ್ಕಿದ್ದು, ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡಿಲ್ಲ ಎಂದು ಕೇಂದ್ರದ ನಡೆಯನ್ನು ಅವರು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ದೇಣಿಗೆ ಹರಿದು ಬರುತ್ತಿದೆ. ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ 10 ಕೋಟಿ, ಹಾಲು ಉತ್ಪಾದಕರ ಒಕ್ಕೂಟ 1 ಕೋಟಿ, ಸರ್ಕಾರಿ ನೌಕರರು 1.5 ಕೋಟಿ ನೀಡಿದ್ದಾರೆ.
ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಿಂದ 2 ಕೋಟಿ ಕೊಡಲು ನಿರ್ಧರಿಸಿದ್ದೇವೆ. ಜಾನುವಾರು ಕಳೆದುಕೊಂಡಿರುವವರಿಗೆ 15 ರಿಂದ 30 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ನೂರಕ್ಕೆ ನೂರು
ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಿದ್ದು, ಸ್ಥಳಾಂತರಕ್ಕೆ ಬೇಕಾದ ಭೂಮಿ ಬಗ್ಗೆ ಅಧಿಕಾರಿಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಎಲ್ಲರ ಸಹಕಾರದೊಂದಿಗೆ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುವುದು. ಪುನರ್ವಸತಿ ಕಲ್ಪಿಸಲು ಕೈಗಾರಿಕೋದ್ಯಮಿಗಳು, ಕಾರ್ಪೋರೇಟ್ ಸಂಸ್ಥೆಗಳು ನೆರವಾಗಬೇಕು ಎಂದು ಅವರು ಮನವಿ ಮಾಡಿದರು.
ಇದೂವರೆಗೆ ಪ್ರಾಕೃತಿಕ ವಿಕೋಪದಿಂದಾಗಿ 6 ಸಾವಿರ ಕೋಟಿ ರೂ.ಗಳಷ್ಟು ನಷ್ಟವುಂಟಾಗಿದೆ. ಕೇಂದ್ರ ಸರ್ಕಾರಕ್ಕೆ 3 ಸಾವಿರ ಕೋಟಿ ರೂ.ಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಕೇಂದ್ರಕ್ಕೆ ವರದಿ ನೀಡಲಿದ್ದಾರೆ. ಪರಿಸ್ಥಿತಿಯನ್ನು ಇನ್ನು ಕೆಲವು ದಿನಗಳ ಕಾಲ ಅವಲೋಕಿಸಿ ಬಳಿಕ ರಾಷ್ಡ್ರೀಯ ವಿಪತ್ತು ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ನೆರೆಹಾವಳಿ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಕೊಡಗಿನಲ್ಲಿಯೂ ಪ್ರಾಕೃತಿಕ ವಿಕೋಪ ಸಂಭವಿಸಿದ್ದು, ಇಂದು ಹೆಲಿಕ್ಯಾಪ್ಟರ್ ಅಥವಾ ರಸ್ತೆ ಮಾರ್ಗದ ಮೂಲಕ ಅಲ್ಲಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದರು.
ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಕಳೆದ 40 ವರ್ಷಗಳಲ್ಲಿ ಇಂತಹ ಪ್ರವಾಹ ಎದುರಾಗಿರಲಿಲ್ಲ. 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಸದ್ಯದ ಅಂಕಿಅಂಶಗಳ ಪ್ರಕಾರ 26 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಕೊಡಗು ಸೇರಿದಂತೆ ಇನ್ನೂ ಕೆಲವು ಭಾಗಗಳ ವಿವರ ಇನ್ನೂ ಬರಬೇಕಿದೆ. ಈವರೆಗೂ 2,35,105 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
624 ಪರಿಹಾರ ಕೇಂದ್ರ ಗಳ ತೆರೆಯಲಾಗಿದ್ದು, ಪರಿಹಾರ ಕೇಂದ್ರದಲ್ಲಿ 1.57 ಲಕ್ಷಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ಎಲ್ಲಾ ಭಾಗಗಳಲ್ಲಿಯೂ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. 80 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶ ಘೋಷಿಸಲಾಗಿದೆ. 3,22, 448 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ಯಡಿಯೂರಪ್ಪ ವಿವರ ನೀಡಿದರು.
5 ತಂಡಗಳು ಪ್ರವಾಹ ಹಾನಿಯ ಕುರಿತು ವಿಶ್ಲೇಷಣೆ ಮಾಡಲಿವೆ. ಪ್ರಧಾನಿ ಮತ್ತು ಗೃಹ ಸಚಿವರಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗಿದೆ. ಕೊಡಗಿಗೆ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ.3 ಸಾವಿರ ಕೋಟಿ ರೂ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.
ಆಗಸ್ಟ್ 13 ರಂದು ಸಿಆರ್ ಪಿ ಎಫ್ ಪರೀಕ್ಷೆ ನಡೆಯಬೇಕಿತ್ತು. ನೆರೆಹಾವಳಿಯಿಂದ ಅಭ್ಯರ್ಥಿಗಳ ಮೂಲ ದಾಖಲೆಗಳು ನಾಶವಾಗಿದ್ದು, ಪರೀಕ್ಷೆಯನ್ನು ಮುಂದೂಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.
ಸಂಸದ ಪ್ರಹ್ಲಾದ್ ಜೋಷಿ ಅವರು ನೀಡಿದ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ನೆರೆಪರಿಹಾರ ಕೋರಿ ಕೇಂದ್ರಕ್ಕೆ ನೆರವು ಕೇಳುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿಲ್ಲ. ಕೇಂದ್ರ ಸರ್ಕಾರ ತುರ್ತು ನೆರವು ಒದಗಿಸಿದೆ. ಎಸ್ ಡಿ ಆರ್ ಎಫ್ ಮೂಲಕ 126 ಕೋಟಿ ರೂ ಕೂಡಲೇ ಬಿಡುಗಡೆ ಮಾಡಿದೆ ಎಂದರು.
ಒಂದೆರಡು ದಿನಗಳ ಹಿಂದೆ ಸಂಪುಟ ರಚನೆ ಕುರಿತು ವರಿಷ್ಠರ ಜೊತೆ ಚಚರ್ಿಸಲು ದೆಹಲಿಗೆ ಹೋಗಿದ್ದಾದರೂ ಸಂಪುಟ ರಚನೆ ಸಾಧ್ಯವಾಗಿಲ್ಲ. ಇನ್ನು ಎರಡು ದಿನಗಳಲ್ಲಿ ರಾಜ್ಯದ ಪರಿಸ್ಥಿತಿ ನೋಡಿ ಕೊಂಡು ಮತ್ತೆ ದೆಹಲಿಗೆ ಭೇಟಿ ನೀಡಲಿದ್ದೇನೆ. ಆದಷ್ಟು ಬೇಗ ಮಂತ್ರಿಮಂಡಲ ರಚನೆಯಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.