ಮುಂಬೈ , ನ 5: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಉನ್ನತ ನಾಯಕರ ಸಭೆ ನಡೆಸಿದರೂ , ಗಡುವು ಮುಗಿಯುವ ಸಮಯದ ಹತ್ತಿರವಾಗುತ್ತಾ ಬಂದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರದೆ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿವೆ. ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಜೊತೆಗೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದರೂ ಯಾವುದೇ ಫಲ ಕೊಟ್ಟಿಲ್ಲ, ಅಂತಿಮ ತೀರ್ಮಾನಕ್ಕೆ ಬರಲೂ ಸಾಧ್ಯವಾಗಿಲ್ಲ, ಮೇಲಾಗಿ ಎಲ್ಲರೂ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಹಾಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 105 ಸ್ಥಾನಗಳನ್ನು ಗೆದ್ದಿದ್ದರೆ ,ಮಿತ್ರ ಪಕ್ಷ ಶಿವಸೇನೆ 56, ಎನ್ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿದ್ದು ಸರಳ ಬಹುಮತಕ್ಕೆ 145 ಸ್ಥಾನಗಳ ಅವಶ್ಯಕತೆಯಿದೆ. ಶೀಘ್ರದಲ್ಲಿಯೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಹಾಲಿ ಮುಖ್ಯಮಂತ್ರಿ ಹೇಳಿದ್ದರೂ ಅದು ಸುಲಭವಲ್ಲ ಎಂಬ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಟ್ಟಾರೆ ಎರಡೂ ಕಡೆಯವರು ಕಾದು ನೋಡುವ ಸ್ಥಿತಿಗೆ ಬಂದುಮುಟ್ಟಿದ್ದಾರೆ.