ನವದೆಹಲಿ, ನ. 18 : ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಮುಂದಿನ ತಿಂಗಳ 13 ವರೆಗೆ ನಡೆಯಲಿದ್ದು, ಸರಕಾರವನ್ನು ಹಣಿಯಲು ವಿಪಕ್ಷಗಳು ಸಜ್ಜಾಗಿವೆ. ಆಥರ್ಿಕ ಮುಗ್ಗಟ್ಟು, ಕೃಷಿ ಕ್ಷೇತ್ರದ ಬಿಕ್ಕಟ್ಟು ನಿರುದ್ಯೋಗ ಇತ್ಯಾದಿ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಚಾಟಿ ಬೀಸಲು ವಿಪಕ್ಷಗಳು ಒಂದೆಡೆ ಸಜ್ಜಾಗಿವೆ. ಪೌರತ್ವ ಮಸೂದೆ ಸೇರಿದಂತೆ ಕೆಲವು ಮಸೂದೆಗಳ ಅಂಗಿಕಾರಕ್ಕೆ ಆಡಳಿತ ಪಕ್ಷ ಹೊಂಚು ಹಾಕಿ ಕುಳಿತಿದೆ. ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರ್ಕಾರದ ಎರಡನೇ ಅಧಿವೇಶನವಾಗಿದೆ. ಹಿಂದಿನ ಅಧಿವೇಶನದಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ಹಿಂಪಡೆದದ್ದು, ತ್ರಿವಳಿ ತಲಾಖ್ ಕಾನೂನಿಗೆ ಮುಕ್ತಿ ಕೊಡಿಸಿದ್ದು ಹಲವು ಮಹತ್ವಪೂರ್ಣ ಮಸೂದೆ ಅಂಗೀಕಾರವಾಗಿದ್ದವು. ಈ ಬಾರಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಸೂದೆಗಳ ಪೈಕಿ ವಿವಾದಕೆ ಗುರಿಯಾಗಿರುವ ಪೌರತ್ವ ತಿದ್ದುಪಡಿ ಮಸೂದೆ ಸರಕಾರ ಮತ್ತು ವಿಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗುವ ಲಕ್ಷಣಗಳಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ವ್ಯಕ್ತಿಗಳಿಗೆ ಭಾರತೀಯ ಪೌರತ್ವ ನೀಡಲು ಅನುವು ಮಾಡಿಕೊಡುವ ಕಾನೂನು ಆಗಿದೆ. ಅಂದರೆ, ವಿದೇಶಗಳಿಂದ ವಲಸೆ ಬಂದಿರುವ ಮುಸ್ಲಿಮರನ್ನು ಮಾತ್ರ ಗುರುತಿಸಿ ಅವರನ್ನು ದೇಶಭ್ರಷ್ಟರನ್ನಾಗಿ ಮಾಡುವುದೇ ಇದರ ಗುರಿಯಾಗಿದೆ ಎಂದೂ ವಿಪಕ್ಷಗಳು ಪ್ರಬಲವಾಗಿ ಆರೋಪಿಸಿವೆ.