ಬೆಂಗಳೂರು, ಜೂ 5, ವಿಶ್ವಪರಿಸರ ದಿನಕ್ಕೆ ನಾಡಿನ ಗಣ್ಯರು ಶುಭ ಕೋರಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪರಿಸರ ಎಂದರೆ ಮನುಷ್ಯನೊಬ್ಬನೇ ಅಲ್ಲ, ಮಣ್ಣು, ಗಾಳಿ, ಮರ, ನದಿ, ಗುಡ್ಡ, ಪ್ರಾಣಿ, ಪಕ್ಷಿ ಹುಳು-ಹುಪ್ಪಟೆಯಾದಿಯಾಗಿ ಸಕಲ ಜೀವಾತ್ಮಗಳು ಸೇರಿಕೊಂಡಿರುವ ಕೂಡು ಕುಟುಂಬ ಎಂದಿದ್ದಾರೆ.ಕೂಡಿ ಬದುಕಿದರೆ ಸ್ವರ್ಗ, ಕೆಡವಿ ಬದುಕಿದರೆ ನರಕ ಎಂದು ಟ್ವೀಟ್ ಮೂಲಕ ಪರಿಸರ ಸಂದೇಶ ಸಾರಿದ್ದಾರೆ.ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಮಸ್ತರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯ ಕೋರಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಯವರಿಗೂ ಉತ್ತಮ ಪರಿಸರವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದಿದ್ದಾರೆ.ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಪರಿಸರವನ್ನು ಮಗುವಿನಂತೆ ರಕ್ಷಿಸಿ ಉಳಿಸಿ ಬೆಳೆಸಿ ತಾಯಿಯಂತೆ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಕಾಳಜಿಯ ಪ್ರಜ್ಞೆಯು ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕು ಎಂದು ಕರೆ ನೀಡಿದ್ದಾರೆ.