ಗದಗ 23: ಪ್ಯಾನೆಲ್ ವಕೀಲರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಾಗಬೇಕು ಎಂದು ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ತಿಳಿಸಿದರು.
ಗದಗ ಬೆಟಗೇರಿ ನಗರಸಭೆಯ ಸಭಾಭವನದಲ್ಲಿಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಹೊಸದಾಗಿ ನೇಮಕಗೊಂಡ ಪ್ಯಾನಲ್ ವಕೀಲರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈ ದೇಶದಲ್ಲಿ ಅಸಂಘಟಿತ ಜನರಿಗೆ, ದುರ್ಬಲವರ್ಗ, ಮಹಿಳೆ, ಬಡವರಿಗೆ ಯಾವುದೇ ಪಕ್ಷಪಾತ ಇಲ್ಲದೇ ನ್ಯಾಯದಾನ ಮಾಡುವಲ್ಲಿ ಪ್ಯಾನೆಲ್ ವಕೀಲರು ಹೆಚ್ಚಿನ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸಬೇಕು. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಕಾರ್ಯಾಗಾರದಲ್ಲಿ ಪರಿಹರಿಸಿಕೊಳ್ಳಬಹುದು. ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲ ಪ್ಯಾನಲ್ ವಕೀಲರು ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡಿ ರೈತರು ಹಾಗೂ ಮಕ್ಕಳು ಸೇರಿದಂತೆ ಸಾರ್ವಜನಿಕರು ಕಾನೂನು ಕುರಿತು ತಿಳುವಳಿಕೆ ಹೊಂದುವುದು ಅತ್ಯವಶ್ಯಕವಾಗಿದೆ ಎಂದು ನುಡಿದರು. ಕಾರ್ಯಾಗಾರದಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಆರ್.ಕೆ. ಕಾಗದಗಾರ, ಒಂದನೇಯ ಹೆಚ್ಚುವರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಜಿ. ಚಲುವಮೂರ್ತಿ, ತರಬೇತುದಾರರಾದ ರಮಾದೇವಿ, ಪ್ಯಾನೆಲ್ ವಕೀಲರುಗಳು ಉಪಸ್ಥಿತರಿದ್ದರು. ಪ್ಯಾನಲ್ ವಕೀಲರಾದ ಕು. ಕೆ.ಎಂ. ಶಲವಡಿ ಪ್ರಾರ್ಥಿಸಿದರು. ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದಶರ್ಿ ಹಾಗೂ ಪ್ಯಾನಲ್ ವಕೀಲರಾದ ವೈ. ಡಿ.ತಳವಾರ ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರ ಬಿ.ಎಂ. ಕುಕನೂರ ಕಾರ್ಯಕ್ರಮ ನಿರೂಪಿಸಿದರು.