ಲಾಠಿಚಾರ್ಜ್‌ ಖಂಡಿಸಿ ಪಂಚಮಸಾಲಿ ಸಮಾಜದ ಪ್ರತಿಭಟನೆ

Panchamasali Samaj protests against lathi charge

ತಾಳಿಕೋಟಿ 12: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಲಾಠಿಚಾರ್ಜ್‌ ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ತಾಲೂಕ ಪಂಚಮಸಾಲಿ ಸಮಾಜ ಹಾಗೂ ನಗರ ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.  

ಪಟ್ಟಣದ ವಿಠಲ ಮಂದಿರದಿಂದ ಪಂಚಮಸಾಲಿ ಸಮಾಜ ಬಾಂಧವರು ಹಲಗೆ ಮೇಳಗಳೊಂದಿಗೆ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿ ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಬಸ್ ನಿಲ್ದಾಣದ ಮುಂಭಾಗದ ರಸ್ತೆ ಮೂಲಕ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ನಂತರ ಸಿರಸ್ತೆದಾರ ಜೈನಾಪುರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ(ಕೂಚಬಾಳ ) ಮಾತನಾಡಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜವು ನಡೆಸುತ್ತಿರುವ ಈ ಹೋರಾಟ ನಿನ್ನೆ ಮೊನ್ನೆಯದಲ್ಲ ಸುಮಾರು 12 ವರ್ಷಗಳಿಂದ ನಡೆಯುತ್ತಾ ಬಂದಿದೆ ಜಗದ್ಗುರುಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸಲಾಗಿದೆ.ಬೆಳಗಾವಿ ಅಧಿವೇಶನ ಆರಂಭ ಪೂರ್ವದಲ್ಲಿ ಸಮಸ್ಯೆ ಕುರಿತು ಮಾತನಾಡಲು ಸರ್ಕಾರಕ್ಕೆ ಗಡುವು ನೀಡಿದರೂ ಸ್ಪಂದಿಸದೆ ಇದ್ದಾಗ ಶ್ರೀಗಳು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿ ಶಾಂತಿಯುತವಾದ ಹೋರಾಟವನ್ನು ನಡೆಸುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು ವೇದಿಕೆಗೆ ಬಾರದೆ ಕೆಲವು ಸಚಿವರನ್ನು ಕಳೆಸಿದಾಗ ಆಗಲೂ ಶ್ರೀಗಳು ತಮ್ಮ ನೇತೃತ್ವದ ಒಂದು ನಿಯೋಗ ಅವರ ಜೊತೆ ಮಾತನಾಡಲು ಬಯಸುತ್ತದೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರೂ ಇದಕ್ಕೆ ಅವಕಾಶ ಕೊಡದೆ ಹೋರಾಟಗಾರರ ಮೇಲೆ ಪೊಲೀಸರಿಂದ ದೌರ್ಜನ್ಯ ಎಸೆಗಲಾಯಿತು ಇದು ಖಂಡನೀಯ, ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಸಮಾಜ ಇದಲ್ಲ,ಇದು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಮಾಜವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಾಜವು ಸರ್ಕಾರ ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಪಾಠ ಕಲಿಸಲಿದೆ. ಈ ರೈತ ವಿರೋಧಿ ಸರ್ಕಾರಕ್ಕೆ ರೈತರ ಶಾಪ ತಟ್ಟಿಲಿದೆ ಎಂದರು.  

ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಡಾ.ವಿ.ಎಸ್‌.ಕಾರ್ಚಿ,ಮುಖಂಡ ವೀರೇಶ ಬಾಗೇವಾಡಿ (ಮಿಣಜಗಿ) ಹಾಗೂ ಯುವ ಮುಖಂಡ ಮಹಾಂತೇಶ ಮುರಾಳ ಮಾತನಾಡಿ ಸಮಾಜದ ಮೇಲಾಗಿರುವ ದೌರ್ಜನ್ಯವನ್ನು ಖಂಡಿಸಿದರು.  

ಪ್ರತಿಭಟನೆಯಲ್ಲಿ ಮಂಜುಳಾ ತಾಯಿ ಬಳಗಾನೂರ,ಸಮಾಜದ ಮುಖಂಡರಾದ ಕಾಶಿನಾಥ ಮುರಾಳ,ಆರ್‌.ವೈ.ಜಾಲವಾದಿ,ಶ್ರೀಶೈಲ ಬಿಳೇಭಾವಿ,ಪ್ರಕಾಶ ಸಾಸಾಬಾಳ ,ನಿಂಗಣ್ಣ ಕುಂಟೋಜಿ, ಡಿ.ವಿ.ಪಾಟೀಲ, ಈಶ್ವರಪ್ಪ ಬಿಳೇಭಾವಿ, ಕುಮಾರಗೌಡ ಪಾಟೀಲ, ಪ್ರಭು ಬಿಳೆಭಾವಿ, ಅಶೋಕ ಚಿನಗುಡಿ, ಜಗದೀಶ ಬಿಳೆಭಾವಿ, ನಾಗಪ್ಪ ಚಿನಗುಡಿ, ಬಸ್ಸು ಕಶಟ್ಟಿ, ನಾಗಪ್ಪ ಚಿನಗುಡಿ, ಚನಬಸ್ಸು ದೇಸಾಯಿ, ಸಂಗನಗೌಡ ಪಾಟೀಲ, ಸಿದ್ದಲಿಂಗ ಸರೂರ, ಬಸನಗೌಡ ಪಾಟೀಲ, ಮುತ್ತುಗೌಡ ಪಾಟೀಲ, ವಿಶ್ವನಾಥ್ ಪಾಟೀಲ, ಮಯೂರ ಪಾಟೀಲ, ರಾಮನಗೌಡ ಬಾಗೇವಾಡಿ, ಅಪ್ಪು ಆನೇಸೂರ, ವಿಶ್ವನಾಥ ಬಿದರಕುಂದಿ, ಕಲ್ಲನಗೌಡ ಪಾಟೀಲ, ತಾಲೂಕಾ ಪಂಚಮಸಾಲಿ ಸಮಾಜದ ಮುಖಂಡರು ಯುವಕರು ಭಾಗವಹಿಸಿದ್ದರು.