ರಾವಲ್ಪಿಂಡಿ, ಫೆ 10 : ಇಲ್ಲಿನ ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಯಾಸೀರ್ ಶಾ ಹಾಗೂ ನಸೀಮ್ ಶಾ ಅವರ ಸ್ಪಿನ್ ಮೋಡಿಯ ನೆರವಿನಿಂದ ಪಾಕಿಸ್ತಾನ ತಂಡ ಮೊದಲನೇ ಹಣಾಹಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಹಾಗೂ 44 ರನ್‌ಗಳಿಂದ ಜಯ ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕ್ 1-0 ಮುನ್ನಡೆ ಪಡೆಯಿತು.
ನಾಲ್ಕನೇ ದಿನವಾದ ಸೋಮವಾರ ಬೆಳಗ್ಗೆ ಆರು ವಿಕೆಟ್ ಕಳೆದುಕೊಂಡು 126 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶಕ್ಕೆ ಇನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ಇನ್ನೂ 86 ರನ್ ಅಗತ್ಯವಿತ್ತು. ಆದರೆ, ಕೇವಲ 42 ರನ್ ದಾಖಲಿಸುವ ಮೂಲಕ 168 ರನ್‌ಗಳಿಗೆ ಪ್ರವಾಸಿ ತಂಡ ಸರ್ವ ಪತನ ಕಂಡಿತು. ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾತ್ರಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮೊಮಿನುಲ್ ಹಕ್ (41 ರನ್) ಕೇವಲ ನಾಲ್ಕು ರನ್‌ಗಳಿಸಿ ಶಾಹೀನ್ ಆಫ್ರಿದಿಗೆ ವಿಕೆಟ್ ಕೊಟ್ಟು ಪೆವಿಲಿಯನ್‌ಗೆ ದೌಡಾಯಿಸಿದರು. ಕೇವಲ 5 ರನ್ ಗಳಿಸಿದ ರುಬೆಲ್ ಹೊಸೈನ್, ಮೊಹಮ್ಮದ್ ಅಬ್ಬಾಸ್‌ಗೆ ವಿಕೆಟ್ ಕೊಟ್ಟು ಹೊರ ನಡೆದರು. ವಿಕೆಟ್ ಕೀಪರ್ ಲಿಟನ್ ದಾಸ್ 29 ರನ್ ಗಳಿಸಿ ಅಬು ಜಹೇದ್ ಕೊನೆಯ ವಿಕೆಟ್‌ಗೆ ಆಹಾರವಾದರು. ಯಾಸೀರ್ ಶಾ ಹಾಗೂ ನಸೀಮ್ ಇಬ್ಬರೂ ಲೆಗ್ ಸ್ಪಿನ್ನರ್‌ಗಳು ತಲಾ ನಾಲ್ಕು ವಿಕೆಟ್ ಪಡೆದುಕೊಂಡರು.
ಭಾನುವಾರ ಅತ್ಯುತ್ತಮ ಸ್ಪಿನ್ ದಾಳಿ ನಡೆಸಿದ್ದ ನಾಸೀರ್ ಶಾ ಹ್ಯಾಟ್ರಿಕ್ ವಿಕೆಟ್ ಕಿತ್ತು ಪಾಕಿಸ್ತಾನವನ್ನು ಗೆಲುವಿನ ಸಮೀಪ ತಂದಿದ್ದರು. ಜತೆಗೆ, ಹ್ಯಾಟ್ರಿಕ್ ವಿಕೆಟ್ ಪಡೆದ ಅತಿ ಕಿರಿಯ ಟೆಸ್ಟ್ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಒಟ್ಟಾರೆ, ಇವರು 26 ರನ್ ನೀಡಿ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಾಕಿಸ್ತಾನ ಮೊದಲನೇ ಇನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಬಾಬರ್ ಅಜಮ್ ಹಾಗೂ ಶಾನ್ ಮಸೂದ್ ಶತಕ ಬಾರಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 233ಕ್ಕೆ ಆಲೌಟ್ ಆಗಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ ಪಾಕಿಸ್ತಾನ 222 ರನ್ ಮುನ್ನಡೆ ಗಳಿಸಿತ್ತು. ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಏಪ್ರಿಲ್ 5 ರಿಂದ 9ರವರೆಗೆ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: 233 ಹಾಗೂ 168/10 (ಮೊಮಿನುಲ್ ಹಕ್ 41, ನಜ್ಮುಲ್ ಹೊಸೈನ್ 38; ನಸೀಮ್ ಶಾ 4/26, ಯಾಸೀರ್ ಶಾ 4/58); ಪಾಕಿಸ್ತಾನ: 445/10 (ಬಾಬರ್ ಅಜಮ್ 143, ಶಾನ್ ಮಸೂದ್ 100, ಅಬು ಜಾಹೇದ್ 3/86, ರುಬೆಲ್ ಹೊಸೈನ್ 3/113)