ಲಾಡೆನ್ ‘ಹುತಾತ್ಮ’ ಎಂಬ ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನ ಪ್ರತಿಪಕ್ಷಗಳ ಆಕ್ರೋಶ

ಇಸ್ಲಾಮಾಬಾದ್,  ಜೂನ್ 26: ಅಮೆರಿಕಾದ ಮೇಲೆ  ೨೦೦೧ರ ಸೆಪ್ಟೆಂಬರ್ ೧೧ರಂದು  ನಡೆಸಲಾದ ಭೀಕರ ದಾಳಿಯ ಸೂತ್ರದಾರ,  ಜಾಗತಿಕ  ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್   ನನ್ನು   ಪಾಕಿಸ್ತಾನ ಪ್ರಧಾನಿ  ಇಮ್ರಾನ್  ಖಾನ್   “ಹುತಾತ್ಮ”   ಎಂದು   ಸಂಬೋಧಿಸಿರುವ   ಬಗ್ಗೆ     ಅಲ್ಲಿನ  ಪ್ರತಿಪಕ್ಷಗಳು     ಮಾಜಿ  ಕ್ರಿಕೆಟರ್ ವಿರುದ್ದ    ಆಕ್ರೋಶ  ವ್ಯಕ್ತಪಡಿಸಿದೆ. ೨೦೧೧ ರಲ್ಲಿ  ಪಾಕಿಸ್ತಾನದ ಅಬೋಟಾಬಾದ್ ನಲ್ಲಿನ     ಲಾಡೆನ್   ಅಡಗು ದಾಣದ ಮೇಲೆ ಅಮೆರಿಕಾ  ಪಡೆಗಳು ದಾಳಿ ನಡೆಸಿದ ಘಟನೆಯನ್ನು  ಉಲ್ಲೇಖಿಸಿ  ಇಮ್ರಾನ್  ಖಾನ್  ಗುರುವಾರ ಪಾಕಿಸ್ತಾನ ಸಂಸತ್ತಿನಲ್ಲಿ  ಹೇಳಿಕೆ  ನೀಡಿದ್ದರು. ಅಫ್ಘಾನಿಸ್ತಾನದಿಂದ  ಅಮೆರಿಕಾ ಹೆಲಿಕಾಪ್ಟರ್‌ಗಳು ಲಾಡೆನ್   ಅಡಗುದಾಣದ ಮೇಲೆ    ನಡೆಸಿದ ಕಾರ್ಯಾಚರಣೆಯ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದರು.

ಅಮೆರಿಕಾ ಪಡೆಗಳು  ಅಬೋಟಾಬಾದ್  ಗೆ ಬಂದು ಒಸಾಮಾ ಬಿನ್ ಲಾಡೆನ್ನನ್ನು ಕೊಂದು ಹುತಾತ್ಮರನ್ನಾಗಿ ಮಾಡಿದ ಈ ಒಂದು ಘಟನೆ ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಆ ಘಟನೆಯನ್ನು ನಾನು  ಮರೆಯುವುದಿಲ್ಲ ಎಂದು ಇಮ್ರಾನ್ ಖಾನ್  ಹೇಳಿದ್ದರು.ಇಮ್ರಾನ್ ಅವರ ಈ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಖ್ವಾಜಾ ಆಸಿಫ್  ತೀವ್ರ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ನಿರ್ಧಯಿ  ಭಯೋತ್ಪಾದಕನನ್ನು   ಹುತಾತ್ಮ   ಎಂದು ಇಮ್ರಾನ್ ಖಾನ್  ಕೊಂಡಾಡಿದ್ದಾರೆ  ಎಂದು   ದೂರಿದ್ದಾರೆ.   ಅಮೆರಿಕಾ  ದಾಳಿ ನಡೆಸಿದ  ಸಮಯದಲ್ಲಿ   ಅಧಿಕಾರಲ್ಲಿದ್ದ   ಪಿಪಿಪಿ ನಾಯಕ  ಬಿಲಾವಲ್ ಭುಟ್ಟೊ ಜರ್ಧಾರಿ  ಕೂಡಾ   ಇಮ್ರಾನ್ ಖಾನ್  ಹೇಳಿಕೆಗೆ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಹಿಂಸಾತ್ಮಕ ಉಗ್ರವಾದವನ್ನು  ಪ್ರಧಾನಿ ಸಮರ್ಥಿಸಿಕೊಳ್ಳುತ್ತಿದ್ದಾರೆ   ಅವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.