ಪಾಕಿಸ್ತಾನ: ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ

ಇಸ್ಲಾಮಾಬಾದ್, ಜುಲೈ 4: (ಕ್ಸಿನುವಾ) ಪೂರ್ವ  ಪಾಕಿಸ್ತಾನದ  ಶೇಖ್ ಪುರ್  ಜಿಲ್ಲೆಯಲ್ಲಿ    ಶುಕ್ರವಾರ  ಮಧ್ಯರಾತ್ರಿ  ಪ್ರಯಾಣಿಕರನ್ನು ಹೊತ್ತು   ರೈಲ್ವೆ ಕ್ರಾಸಿಂಗ್ ದಾಟುತ್ತಿದ್ದ ವ್ಯಾನ್ ಗೆ   ರೈಲು  ಡಿಕ್ಕಿ ಹೊಡೆದ  ದುರಂತದಲ್ಲಿ  ಮೃತಪಟ್ಟವರ ಸಂಖ್ಯೆ ೨೨ಕ್ಕೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ರೈಲ್ವೆ  ವಕ್ತಾರ  ಕುರಾತುಲ್ ಐನ್ ತಿಳಿಸಿದ್ದಾರೆ.

   ತೀವ್ರವಾಗಿ ಗಾಯಗೊಂಡಿದ್ದ  ಮೂವರು ಪ್ರಯಾಣಿಕರು  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,  ಸಾವಿನ ಸಂಖ್ಯೆ ೨೨ಕ್ಕೆ ಏರಿಕೆಯಾಗಿದೆ. ಮೃತಪಟ್ಟವರಲ್ಲಿ   ಮಹಿಳೆಯರು, ಮಕ್ಕಳು ಸೇರಿಸಿದ್ದಾರೆ. ಕರಾಚಿಯಿಂದ,  ಲಾಹೋರ್ ಗೆ  ತೆರಳುತ್ತಿದ್ದ ಶಾ ಹುಸೇನ್ ಎಕ್ಸ್ ಪ್ರೆಸ್  ರೈಲು  ಶೇಖ್ ಪುರ   ನಗರದಲ್ಲಿ   ರೈಲ್ವೆ ಕ್ರಾಸಿಂಗ್  ಹಾದು ಹೋಗುತ್ತಿದ್ದ  ವ್ಯಾನ್  ಮೇಲೆ  ಹರಿದು ಈ ದುರಂತ ಸಂಭವಿಸಿದೆ. ರೈಲು  ಸಮೀಪಿಸುತ್ತಿರುವುದನ್ನು ಗಮನಿಸದೆ  ವ್ಯಾನ್  ಚಾಲಕ ಆತುರವಾಗಿ  ಕ್ರಾಸಿಂಗ್  ಹಾದು ಹೋಗಲು ಪ್ರಯತ್ನಿಸಿದ್ದೇ  ಅಪಘಾತಕ್ಕೆ  ಕಾರಣ ಎಂದು  ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

   ಅಪಘಾತಕ್ಕೀಡಾದ  ವ್ಯಾನ್  ನಲ್ಲಿದ್ದವರು  ಬಹುತೇಕ  ನಾನಕಾನ ಸಾಹೀಬ್  ಗುರು ದ್ವಾರಕ್ಕೆ  ಭೇಟಿ ನೀಡಿ  ವಾಪಸ್ಸಾಗುತ್ತಿದ್ದ  ಸಿಖ್  ಯಾತ್ರಾರ್ಥಿಗಳಾಗಿದ್ದಾರೆ.  ಮೃತ ಪ್ರಯಾಣಿಕರು  ಪೇಶಾವರ್ ನಗರದ   ಮೂರು ಅಥವಾ ನಾಲ್ಕು ಕುಟುಂಬಕ್ಕೆ ಸೇರಿದವರಾಗಿದ್ದಾರೆ  ಜಿಲ್ಲಾ ಪೊಲೀಸ್  ಅಧಿಕಾರಿ  ಘಾಝಿ ಸಲಾಹುದ್ದೀನ್ ಹೇಳಿದ್ದಾರೆ. ಅಪಘಾತಕ್ಕೀಡಾದ ವ್ಯಾನ್ ನಲ್ಲಿ   ಸುಮಾರು ೩೦ ಪ್ರಯಾಣಿಕರಿದ್ದರು, ಅಪಘಾತದಲ್ಲಿ  ಯಾವುದೇ ರೈಲು ಪ್ರಯಾಣಿಕರು  ಗಾಯಗೊಂಡಿಲ್ಲ ಎಂದು ತಿಳಿಸಿದ್ದಾರೆ. ಘಟನೆ  ಕುರಿತು ತನಿಖೆಗೆ ಪಾಕಿಸ್ತಾನ ರೈಲ್ವೆ ಮೂವರು ಹಿರಿಯ ಅಧಿಕಾರಿಗಳ  ಸಮಸಮಿತಿಯೊಂದನ್ನು ರಚಿಸಿದೆ.