ಸ್ಥಾನ ಉಳಿಸಿಕೊಂಡ ಪೇಸ್, ತಂಡ ಸೇರಿದ ಬೋಪಣ್ಣ-ಶರಣ್

ನವದೆಹಲಿ, ಫೆ.6 :   ಭಾರತ ಡೇವಿಸ್ ಕಪ್ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಸ್ಥಾನ ಉಳಿಸಿಕೊಂಡಿದ್ದು, ಡಬಲ್ಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ತಂಡಕ್ಕೆ ಮರಳಿದ್ದಾರೆ. ಈ ತಂಡವು ಮಾರ್ಚ್ 6-7ರಂದು ಕ್ರೊಯೇಷಿಯಾ ವಿರುದ್ಧ ಅರ್ಹತಾ ಪಂದ್ಯವನ್ನು ಆಡಲಿದೆ.  

ಕ್ರೊಯೇಷಿಯಾ ವಿರುದ್ಧದ ಪಂದ್ಯಕ್ಕಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ​​(ಎಐಟಿಎ) ಗುರುವಾರ ಏಳು ಸದಸ್ಯರ ತಂಡವನ್ನು ಪ್ರಕಟಿಸಿದೆ.  

ಕಳೆದ ವರ್ಷ ನವೆಂಬರ್‌ನಲ್ಲಿ ಕಜಕಿಸ್ತಾನದ ನೂರ್ ಸುಲ್ತಾನ್‌ನಲ್ಲಿ ಭಾರತ ಪಾಕಿಸ್ತಾನವನ್ನು 4–0ರಿಂದ ಸೋಲಿಸಿ ವಿಶ್ವ ಅರ್ಹತಾ ಪಂದ್ಯಕ್ಕೆ ಅರ್ಹತೆ ಪಡೆಯಿತು. ಕಳೆದ ಪಂದ್ಯದಲ್ಲಿ ಬೋಪಣ್ಣ ಮತ್ತು ಶರಣ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಅವರು ಈ ಪಂದ್ಯಕ್ಕಾಗಿ ಈ ತಂಡಕ್ಕೆ ಮರಳಿದ್ದಾರೆ.  

ಬೋಪಣ್ಣ ಮತ್ತು ಡಬಲ್ಸ್ ಸ್ಪೆಷಲಿಸ್ಟ್ ಶರಣ್ ಅವರನ್ನು ತಂಡದಲ್ಲಿ ಸೇರಿಸಿದ ನಂತರ, ಪೇಸ್, ​​ಬೋಪಣ್ಣ ಮತ್ತು ಶರಣ್ ಇಬ್ಬರು ಆಟಗಾರರಲ್ಲಿ ಯಾರು ಡಬಲ್ಸ್ ಆಡಲು ಅವಕಾಶ ಪಡೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.  

ಭಾರತ ತಂಡಕ್ಕೆ ಪ್ರಜ್ನೇಶ್ ಗುಣೇಶ್ವರನ್ ಕೂಡ ಮರಳಿದ್ದಾರೆ. ಸಿಂಗಲ್ಸ್‌ನಲ್ಲಿ ಭಾರತೀಯ ಸವಾಲಿನ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಸಿಂಗಲ್ಸ್ ಪಂದ್ಯಗಳಲ್ಲಿ ಯುವ ಆಟಗಾರರಾದ ಸುಮಿತ್ ನಾಗಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ಆಡಲಿದ್ದಾರೆ. 

ಪೇಸ್ 1990 ರಲ್ಲಿ ಭಾರತದ ಪರ ಮೊದಲ ಸಲ ಡೇವಿಸ್ ಕಪ್ ಆಡಿದ್ದರು. 46 ವರ್ಷದ ಪೇಸ್ ತಂಡದ ಪರ ಮತ್ತೊಮ್ಮೆ ಅಖಾಡಕ್ಕೆ ಇಳಿಯಲಿದ್ದಾರೆ. ಪೇಸ್ ಈ ವರೆಗೆ ಸಿಂಗಲ್ಸ್ ನಲ್ಲಿ 57 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 48 ಜಯ, 22 ಸೋಲು ಕಂಡಿದ್ದಾರೆ. ಇನ್ನು ಡಬಲ್ಸ್ ನಲ್ಲಿ 92 ಜಯ, 35 ಸೋಲು ಕಂಡಿದ್ದಾರೆ. ಇವರು ಡೇವಿಸ್ ಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಡಬಲ್ಸ್ ಪಂದ್ಯ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   

ರೋಹಿತ್ ರಾಜ್‌ಪಾಲ್ ಈ ತಂಡದ ನಾಯಕರಾಗಿದ್ದಾರೆ. ಪ್ರಜ್ನೇಶ್, ಸುಮಿತ್ ಮತ್ತು ರಾಮ್‌ಕುಮಾರ್ ಸಿಂಗಲ್ಸ್ ಪಂದ್ಯಗಳ ಸವಾಲು ಎಸೆಯಲಿದ್ದು, ಬೋಪಣ್ಣ ಪೇಸ್ ಮತ್ತು ಶರಣ್ ಅವರನ್ನು ಡಬಲ್ಸ್ ಪಂದ್ಯಕ್ಕೆ ಇರಿಸಲಾಗಿದೆ.