ಪಿಯುಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆ: ವಾಹನಗಳ ಅರ್ಹತಾ ಪತ್ರ ನವೀಕರಣ ಮಾಡಿಕೊಳ್ಳುವಂತೆ ಸೂಚನೆ

ಕಲಬುರಗಿ, ಜೂ.6,ಇದೇ ತಿಂಗಳ 18ರಂದು  ದ್ವಿತೀಯ ಪಿಯುಸಿ ಇಂಗ್ಲೀಷ್ ಪತ್ರಿಕೆ ಹಾಗೂ  25ರಿಂದ ಜುಲೈ 4ರವರೆಗೆ  ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ವೇಳಾಪಟ್ಟಿ ನಿಗದಿಪಡಿಸಿದೆ. ಆದ್ದರಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ವಾಹನಗಳ ಅವಶ್ಯಕತೆಯಿರುವುದರಿಂದ ಜಿಲ್ಲೆಯ ವ್ಯಾಪ್ತಿಗೊಳಪಡುವ ಎಲ್ಲಾ ಶಾಲಾ-ಕಾಲೇಜು, ಶೈಕ್ಷಣಿಕ ವಿದ್ಯಾಸಂಸ್ಥೆಗಳು ಜೂ.15ರೊಳಗಾಗಿ ತಮ್ಮ ಶಾಲಾ ವಾಹನಗಳ ಅರ್ಹತಾ ಪತ್ರಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್ ತಿಳಿಸಿದ್ದಾರೆ.ಅಲ್ಲದೇ ಶಾಲಾ-ಕಾಲೇಜು, ಶೈಕ್ಷಣಿಕ ವಿದ್ಯಾಸಂಸ್ಥೆಗಳು ತಮ್ಮ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಚಾಲ್ತಿಯಲ್ಲಿ ಇಟ್ಟಿಕೊಳ್ಳಬೇಕು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ  ಪ್ರಸ್ತುತ ವಾಸಿಸುವ ಸ್ಥಳದ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿ ಪರೀಕ್ಷೆ  ಬರೆಯಲು ವಿಶೇಷ  ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಖಾಸಗಿ ಅಥವಾ ಸರ್ಕಾರಿ  ವಿದ್ಯಾಸಂಸ್ಥೆಗಳು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ವಾಹನಗಳ ವ್ಯವಸ್ಥೆ ಮಾಡುವುದು ಅಗತ್ಯವಿರುತ್ತದೆ ಎಂದರು.ಪ್ರಸುತ್ತ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿ ಅನ್ವಯ ಶಾಲಾ ವಾಹನಗಳು ಕೇವಲ ಜಿಲ್ಲಾ ವ್ಯಾಪ್ತಿಗೆ ಒಳಪಡುವಂತೆ ರಹದಾರಿಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಪಡೆದಿರುತ್ತವೆ. ಈ ವಾಹನಗಳಿಗೆ ರಾಜ್ಯದ್ಯಾಂತ ಸಂಚರಿಸಲು ಅನುಮತಿ ಇರುವುದಿಲ್ಲ. ಆದ್ದರಿಂದ ಈಗಿರುವ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಕೇಂದ್ರಗಳಿಗೆ ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಇತರೆ ಶಾಲೆಗಳ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು, ವ್ಯಾಪ್ತಿಯ ಮಿತಿಯ ಹೊರತಾಗಿ  ರಾಜ್ಯಾದ್ಯಂತ ಯಾವುದೇ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಪರವಾನಿಗೆ ಇಲ್ಲದೇ ಪ್ರಯಾಣಿಸಲು ವಿದ್ಯಾರ್ಥಿ ಸಂಸ್ಥೆಗಳ ವಾಹನಗಳಿಗೆ ವಿಶೇಷ ಅನುಮತಿ ನೀಡಲಾಗಿದೆ. ಈ ವಿಶೇಷ ಅನುಮತಿಯ ಅನ್ವಯ ವಿದ್ಯಾ ಸಂಸ್ಥೆಗಳ ವಾಹನಗಳು ಯಾವುದೇ ಅಡಚಣೆಯಿಲ್ಲದೇ ಸಂಚರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.