ಬಂಜಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಪಿ.ಟಿ.ಪರಮೇಶ್ವರ ನಾಯ್ಕ್ ಒತ್ತಾಯ

ಬೆಂಗಳೂರು, ಮೇ 13,  ಲಂಬಾಣಿ ( ಬಂಜಾರ ) ಸಮುದಾಯದ ವಲಸೆ ಕಾರ್ಮಿಕರಿಗೆ ಕೋವಿಡ್ - 19 ಅಡಿಯಲ್ಲಿ ವಿಶೇಷ  ಪ್ಯಾಕೇಜ್ ನೀಡುವ ಬಗ್ಗೆ ಪಕ್ಷದ ವತಿಯಿಂದ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮಾಜಿ ಸಚಿವ  ಪಿ.ಡಿ.ಪರಮೇಶ್ವರ ನಾಯ್ಕ್‌ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ರಾಜ್ಯದ  ಲಂಬಾಣಿ ( ಬಂಜಾರ ) ಸಮುದಾಯದವರು ಕಡುಬಡವರಾಗಿದ್ದು , ಉದ್ಯೋಗ ಅರಸಿ ನಮ್ಮ ರಾಜ್ಯದ  ಮತ್ತು ಹೊರ ರಾಜ್ಯಗಳಾದ ಮಹಾರಾಷ್ಟ್ರ , ಗೋವಾ , ಆಂಧ್ರಪ್ರದೇಶ , ತೆಲಂಗಾಣ ಮತ್ತು ಕೇರಳ  ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ , ಕೋವಿಡ್ - 19 ಹಿನ್ನೆಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರು  ತಮ್ಮ ತಮ್ಮ ತಾಂಡಾಗಳಿಗೆ ತಲುಪಿದ್ದಾರೆ ಹಾಗೂ ಇನ್ನೂ ಕೆಲವರು ತಲುಪುತ್ತಿದ್ದು , ಇವರು  ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ  ರಾಜ್ಯದ ಬೇರೆ ವರ್ಗದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.  ಬದುಕು  ಕಟ್ಟಿಕೊಳ್ಳಲು ಸಾಧ್ಯವಾಗದೇ ಒಂದು ಹೊತ್ತಿನ ಊಟಕ್ಕಾಗಿ ಕೆಲಸವಿಲ್ಲದೇ ಬರಿಗೈಯಲ್ಲಿರುವ  ಲಂಬಾಣಿ ಜನಾಂಗದ ವಲಸೆ ಕೂಲಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ ಮಾಸಿಕ ರೂ. 10,000  ರೂ. ಸಹಾಯಧನ ನೀಡಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್  ಪಕ್ಷದ ವತಿಯಿಂದ ಒತ್ತಾಯ ಮಾಡಿ ತಮ್ಮ ಸಮುದಾಯದ ನೆರವಿಗೆ ಧಾವಿಸಬೇಕೆಂದು  ಸಿದ್ದರಾಮಯ್ಯಗೆ ಪರಮೇಶ್ವರ ನಾಯ್ಕ್‌ ಮನವಿ ಮಾಡಿದ್ದಾರೆ.