ಬೈಕ್ ಸ್ಕೀಡ್ ಆಗಿ ಪ್ರಾಣಬಿಟ್ಟ ಪಿಎಸ್ ಐ

ಬೆಳಗಾವಿ,  ಏ.18, ಲಾಕ್​​ಡೌನ್ ಕರ್ತವ್ಯ ನಿರ್ವಹಿಸಲು ಬರುತ್ತಿದ್ದ ಪಿಎಸ್ಐ ಓರ್ವರು   ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿಯಲ್ಲಿ ಶನಿವಾರ ನಡೆದಿದೆ.ಖಡೇಬಜಾರ್ ಪೊಲೀಸ್  ಠಾಣೆಯ  ಮನೋಹರ್ ಗಣಾಚಾರಿ ಮೃತಪಟ್ಟ ಪಿಎಸ್​​ಐ. ಯಳ್ಳೂರು  ಗ್ರಾಮದಿಂದ ಗಣಾಚಾರಿ ಅವರು ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್  ಬಂದೊಬಸ್ತ್​​​  ಕರ್ತವ್ಯಕ್ಕಾಗಿ ಬರುತ್ತಿದ್ದಾಗ ಯಳ್ಳೂರು ಸಮೀಪದ ಕೆಎಲ್ ಇ ಆಸ್ಪತ್ರೆ ಬಳಿ ಬೆಳಗ್ಗೆ 7  ಗಂಟೆ ಸುಮಾರಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ.‌ ಪ್ರಾಣಿಯನ್ನು  ಉಳಿಸಲು ಹೋಗಿ ಸ್ಕಿಡ್ ಆಗಿ ಅವರು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಲೆಗೆ ಬಲವಾದ  ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ  ಮನೋಹರ ಗಣಾಚಾರಿ ಅವರು, ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿ ಪಿಎಸ್ಐ ಆಗಿದ್ದರು.  ಕಳೆದ ವರ್ಷ ಯಳ್ಳೂರಿನಲ್ಲಿ ಮನೆ ಕಟ್ಟಿಸಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ  ನಿವೃತ್ತಿಯಾಗುವವರಿದ್ದರು.  ಅಷ್ಟರಲ್ಲೇ ಈ ದುರಂತ ಸಂಭವಿಸಿದೆ.ಮೃತರು ಪತ್ನಿ, ಪುತ್ರ, ಮತ್ತು ತಂದೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.