ಈ ಬಾರಿಯೂ ಖಾಸಗಿ ಮಾಧ್ಯಮಗಳಿಗೆ ವಿಧಾನಮಂಡಲ ಕಲಾಪ ಚಿತ್ರೀಕರಣಕ್ಕೆ ಅವಕಾಶವಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಫೆ.14, ಮಾರ್ಚ್  3 ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, 25 ದಿನಗಳ ಕಾಲ ನಡೆಯಲಿರುವ  ಅಧಿವೇಶನದಲ್ಲಿ ಹಲವು ಮಸೂದೆಗಳು ಮಂಡನೆಯಾಗಲಿವೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ  ಕಾಗೇರಿ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಮಾ.5 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ  ಲೋಕಾಯುಕ್ತ ತಿದ್ದುಪಡಿ ವಿಧೇಯಕ ಸೇರಿದಂತೆ ಆರು  ವಿಧೇಯಕಗಳು ಸದನದಲ್ಲಿ  ಮಂಡನೆಯಾಗಲಿವೆ. ಅಧಿವೇಶನ ಕಲಾಪಕ್ಕೆ ಶಾಸಕರು ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಹೆಚ್ಚಿನ  ಸಮಯಾವಕಾಶ ಇರುವುದರಿಂದ ಸದಸ್ಯರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ರಚನಾತ್ಮಕ  ಚರ್ಚೆಯಲ್ಲಿ ಪಾಲ್ಗೊಳ್ಳಲು ಇದು ಉತ್ತಮ ಅವಕಾಶ ಎಂದು ಕರೆ ನೀಡಿದರು.

ಫೆ. 17 ರಂದು  ರಾಜ್ಯಪಾಲ ವಜೂಭಾಯಿವಾಲಾ  ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿ ಭಾಷಣ ಮಾಡಲಿದ್ದು,  ರಾಜ್ಯ ಪಾಲರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.ಮಾ.2   ಮತ್ತು 3 ರಂದು ಸದನದಲ್ಲಿ  ಸಂಪೂರ್ಣವಾಗಿ ಸಂವಿಧಾನ ಕುರಿತು ಚರ್ಚೆಯಾಗಲಿದ್ದು, ಈ  ದಿನಗಳಲ್ಲಿ ಯಾವುದೇ ರಾಜಕೀಯ ಚರ್ಚೆಗೆ ಅವಕಾಶ ಇರುವುದಿಲ್ಲ. ಸಂವಿಧಾನದ ಆಶಯ, ಮೂಲ  ಉದ್ದೇಶ ಮಾತ್ರ ಈ ವೇದಿಕೆಯಲ್ಲಿ ಪಕ್ಷಾತೀತ ಚರ್ಚೆಯಾಗಬೇಕು ಎಂದು ಮನವಿ ಮಾಡಿದರು.ಕಳೆದ  ಬಾರಿಯಂತೆ ಈ ಬಾರಿಯೂ ಸಹ ಖಾಸಗಿ ಮಾಧ್ಯಮಗಳಿಗೆ ಅಧಿವೇಶನ ಕಲಾಪದ ಚಿತ್ರೀಕರಣಕ್ಕೆ  ಅವಕಾಶವಿಲ್ಲ. ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯನ್ನೇ ಎಲ್ಲಾ ವಿಧಾನಸಭೆಗಳು  ಅನುಸರಿಸುತ್ತಿವೆ. ಹೀಗಾಗಿ ಈ ಬಾರಿ ಕೂಡಾ ಲೋಕಸಭೆ, ರಾಜ್ಯಸಭೆ ರೀತಿಯಲ್ಲಿ ಮಾಧ್ಯಮಗಳು  ಬಿತ್ತರಿಸಬೇಕಿದೆ ಎಂದರು.