ಹ್ಯಾಮಿಲ್ಟನ್, ಫೆ 14 : ಕಿವೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಇಬ್ಬರೂ ನ್ಯೂಜಿಲೆಂಡ್ ಎಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.ಇಲ್ಲಿನ ಸೆಡಾನ್ ಪಾರ್ಕ್ ಅಂಗಳದಲ್ಲಿ ಮೊದಲನೇ ದಿನ ಆರಂಭಿಕನಾಗಿ ಕಣಕ್ಕೆ ಇಳಿದ ಪೃಥ್ವಿ ಶಾ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಇಬ್ಬರೂ ಸ್ಕಾಟ್ ಕುಗ್ಲೇಯಿನ್ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪೃಥ್ವಿ ಶಾ ಮೊದಲನೇ ಓವರ್ನಲ್ಲಿ ಎದುರಿಸಿದ ಐದನೇ ಎಸೆತದಲ್ಲಿ ಔಟ್ ಆದರು. ಗಿಲ್ ಆಡಿದ ಮೊದಲೇ ಎಸೆತದಲ್ಲಿಯೇ ಕುಗ್ಲೇಯಿನ್ ಎಸೆತದಲ್ಲಿ ಸೀಫರ್ಟ್ಗೆ ಕ್ಯಾಚ್ ನೀಡಿ ಪೆವಿಲಿಯನ್ ತೆರಳಿದರು.ಇದರ ನಡುವೆ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ನಿರಾಸೆ ಮೂಡಿಸಿದರು. ವೆಲ್ಲಿಂಗ್ಟನ್ನಲ್ಲಿ ನಿಯಮಿತ ಆರಂಭಿಕನಾಗಿ ತಯಾರಿಯಲ್ಲಿರುವ ಮಯಾಂಕ್, ಕುಗ್ಲೇಯಿನ್ ಎಸೆತದಲ್ಲಿ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿದರು.ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆ ಹನುಮ ವಿಹಾರಿ ಮೌಲ್ಯಯುತ ಶತಕ ಬಾರಿಸಿದರು. ಜತೆಗೆ, ಟೆಸ್ಟ್ ವಿಶೇಷ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರೊಂದಿಗೆ ಆರನೇ ವಿಕೆಟ್ಗೆ 195 ರನ್ ಗಳಿಸಿದರು. ಆ ಮೂಲಕ ಒಂದು ಹಂತದಲ್ಲಿ 38 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಪೂಜಾರ-ವಿಹಾರಿ ಜೋಡಿ ಮೇಲೆತ್ತಿತು.ಅದ್ಭುತ ಬ್ಯಾಟಿಂಗ್ ಮಾಡಿದ ಚೇತೇಶ್ವರ ಪೂಜಾರ 93 ರನ್ ಗಳಿಸಿ ಶತಕದಂಚಿನಲ್ಲಿ ಜ್ಯಾಕ್ ಗಿಬ್ಸನ್ಗೆ ವಿಕೆಟ್ ಕೊಟ್ಟರು. ಮತ್ತೊಂದೆಡೆ ಹನುಮ ವಿಹಾರಿ 101 ರನ್ ಗಳಿಸಿ ನಿವೃತ್ತಿಯಾದರು. ಇವರ ಸೊಗಸಾದ ಶತಕದಲ್ಲಿ ಮೂರು ಸಿಕ್ಸರ್ ಹಾಗೂ 10 ಬೌಂಡರಿಗಳು ಒಳಗೊಂಡಿವೆ.ವಿಕೆಟ್ ಕೀಪಿಂಗ್ ರೇಸ್ನಲ್ಲಿರುವ ವೃದ್ದಿಮನ್ ಸಾಹ ಹಾಗೂ ರಿಷಭ್ ಪಂತ್ ಕೂಡ ಬ್ಯಾಟ್ ಮೂಲಕ ರನ್ ಗಳಿಸುಲ್ಲಿ ವಿಫಲರಾದರು. ಪಂತ್ 7 ರನ್ ಗಳಿಸಿ ವಿಕೆಟ್ ನೀಡಿದರೆ, ಸಾಹ ಶೂನ್ಯಕ್ಕೆ ಔಟ್ ಆದರು.ಅನಧಿಕೃತ ಟೆಸ್ಟ್ನಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದ ಉಪನಾಯಕ ಅಜಿಂಕ್ಯಾ ರಹಾನೆ ಕೇವಲ 18 ರನ್ಗಳಿಗೆ ಸೀಮಿತರಾದರು. ರವೀಂದ್ರ ಜಡೇಜಾ ಹಾಗೂ ರವಿಚಂದ್ರ ಅಶ್ವಿನ್ ಕ್ರಮವಾಗಿ 8 ಮತ್ತು 0ಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಕಣಕ್ಕೆ ಇಳಿಯಲಿಲ್ಲ. ಒಟ್ಟಾರೆ, ಭಾರತ ಮೊದಲನೇ ದಿನದಾಂತ್ಯಕ್ಕೆ 78.5 ಓವರ್ಗಳಿಗೆ 263 ರನ್ ಗಳಿಗೆ ಆಲೌಟ್ ಆಯಿತು.ಸಂಕ್ಷಿಪ್ತ ಸ್ಕೋರ್: ಭಾರತ 263/10 (ಹನುಮ ವಿಹಾರಿ 101 ನಿವೃತ್ತಿ, ಚೇತೇಶ್ವರ ಪೂಜಾರ 93; ಸ್ಕಾಟ್ ಕುಗ್ಲೇಯಿನ್ 40 ಕ್ಕೆ 3)