ನವದೆಹಲಿ, ಫೆ 17, ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆಯ ಬಳಿಕ ಕಾಂಗ್ರೆಸ್ ಆತ್ಮಾವಲೋಕನ ಮತ್ತು "ತುರ್ತು ಕ್ರಮಕ್ಕೆ ಮುಂದಾಗಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಯ ಮಾತುಗಳು ತೀವ್ರ ಗೊಂಡಿದೆ. ಅಂಬಿಕಾ ಸೋನಿ, ಗುಲಾಮ್ ನಬಿ ಆಝಾದ್ ಮತ್ತು ದಿಗ್ವಿಜಯ ಸಿಂಗ್ ಸೇರಿದಂತೆ ಮತ್ತಿತರ ಹಿರಿಯ ನಾಯಕರ ರಾಜ್ಯಸಭೆಯ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಛತ್ತೀಸ್ ಗಡ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳ ಕೋಟಾದಿಂದ ಈ ಖಾಲಿ ಹುದ್ದೆಗಳನ್ನು ಕಾಂಗ್ರೆಸ್ ಭರ್ತಿ ಮಾಡಲು ಚಿಂತನೆ ಮಾಡುತ್ತಿದೆ.
ಛತ್ತೀಸ್ ಗಡ ದ ನಾಯಕರು ಹಿರಿಯರ ಮನೆಗೆ ಪ್ರಿಯಾಂಕಾ ಗಾಂಧಿ ಪ್ರವೇಶ ಬಯಸಿ ಪ್ರಸ್ತಾವನೆಯನ್ನು ಕಾಂಗ್ರೆಸ್ ನ ಹೈಕಮಾಂಡ್ ನ ಮುಂದಿಟ್ಟಿದ್ದಾರೆ ಎಂದೂ ವರದಿಯಾಗಿದೆ.ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಟಕ್ಕೆ ನಿಲ್ಲುವುದು ಇದರ ಗುರಿ, ಉದ್ದೇಶವಾಗಿದೆ.ಎನ್ನಲಾಗಿದೆ. ಆದರೆ, ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳಹಿಸುವ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದೂ ಪಕ್ಷದ ಮೂಲಗಳು ತಿಳಿಸಿವೆ.