ನವದೆಹಲಿ, ನವೆಂಬರ್ 9 : ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನಾಥ್ ಅವರು ಚುನಾವಣೆಯಲ್ಲಿ ವಿಜಯಿಯಾಗಿರುವುದಕ್ಕೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಚುನಾವಣೆಯಲ್ಲಿ ವಿಜಯಗಳಿಸಿದ ಪಿ.ಕೆ.ಜುಗ್ನಾಥ್ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವಿಟ್ ಮಾಡಿದ್ದಾರೆ. ಉಭಯ ದೇಶಗಳ ನಡುವಿನ ಸಹೋದರ ಸಂಬಂಧ ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಭಾರತ ಮತ್ತು ಮಾರಿಷಸ್ ನಡುವಿನ ಭ್ರಾತೃತ್ವ ಸಂಬಂಧ ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಶೀಘ್ರದಲ್ಲೇ ನಿಮ್ಮೊಂದಿಗೆ ಮಾತನಾಡಲು ಮತ್ತು ನಮ್ಮ ಮಾತುಕತೆಯನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ, ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಸಂಸತ್ತಿನ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಜುಗ್ನಾಥ್ ಅವರು ಮಧ್ಯಂತರ ಚುನಾವಣಾ ಫಲಿತಾಂಶದ ಪ್ರಕಾರ ಐದು ವರ್ಷಗಳ ಅಧಿಕಾರಾವಧಿಯಲ್ಲಿರುತ್ತಾರೆ. ಭಾರತವು ಮಾರಿಷಸ್ನ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, 2007 ರಿಂದ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಕ್ಕೆ ಅತಿದೊಡ್ಡ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುತ್ತಿದೆ.