ನವದೆಹಲಿ, ಜ9 ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ಪ್ರಧಾನಿ ನರೇಂದ್ರಮೋದಿ ಗುರುವಾರ ವಿವಿಧ ಭಾಗೀದಾರರನ್ನು ಭೇಟಿ ಮಾಡಿ, ಭಾರತ 5 ಟ್ರಿಲಿಯನ್ ಆರ್ಥಿಕತೆಯ ಗುರಿಯನ್ನು ಭಾರತ ಸಾಧಿಸುವಂತಾಗಲು ವಿಶೇಷ ಪ್ರಯತ್ನಗಳನ್ನು ಮಾಡುವಂತೆ ಕರೆ ನೀಡಿದರು.
ಹಿರಿಯ ಆರ್ಥಿಕ ತಜ್ಞರು, ಖಾಸಗಿ ಈಕ್ವಿಟಿ ಮತ್ತು ವೆಂಚರ್ ಉದ್ಯಮಿಗಳು, ತಯಾರಿಕೆ, ಪ್ರಸಾಸೋದ್ಯಮ-ಸಾರಿಗೆ, ಸಿದ್ದ ಉಡುಪು, ಎಫ್ ಎಂಸಿಜಿ ಹಾಗೂ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಹಣಕಾಸು ವಲಯದ ವಿಷಯ ತಜ್ಞರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ನೀತಿ ಆಯೋಗ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಹಾಗೂ ಸಣ್ಣ,ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ, ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೃಷಿ ಮತ್ತು ರೈತರ ಕಲ್ಯಾಣ, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಪಾಲ್ಗೊಂಡಿದ್ದರು.
ಈ ಸಭೆಯ ಮೂಲಕ ನೀತಿ ನಿರೂಪಕರು ಮತ್ತು ವಿವಿಧ ಭಾಗೀದಾರರೊಂದಿಗೆ ಸಮನ್ವಯತೆ ವೃದ್ಧಿಸಲಿದೆ. ಭಾರತ, 5 ಟ್ರಿಲಿಯನ್ ಆರ್ಥಿಕತೆಯಾಗುವ ಆಲೊಚನೆ ದಿಢೀರ್ ಬೆಳವಣಿಗೆಯಲ್ಲ. ದೇಶದ ಸಾಮಥ್ರ್ಯದ ಬಗೆ ಅಗಾಧವಾಗಿ ತಿಳಿದು ಈ ಗುರಿ ಹೊಂದಲಾಗಿದೆ. ಮೂಲ ಅಡಿಪಾಯದಿಂದ ಪುಟಿದೇಳುವ ಸಾಮಥ್ರ್ಯ ಭಾರತೀಯ ಆರ್ಥಿಕತೆಗೆ ಇದೆ ಎಂದು ಹೇಳಿದರು.
ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್, ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್ ಮತ್ತು ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸದ್ಯದ ಆರ್ಥಿಕತೆ ಕುರಿತಂತೆ ಮತ್ತು ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ 5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಪ್ರಧಾನಿ ಮೋದಿ ಕಳೆದೊಂದು ವಾರದಿಂದ ಹಿರಿಯ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.