ಮಹಾಬಲಿಪುರಂ ಸಮುದ್ರ ತೀರ ಸ್ವಚ್ಛತಾ ಕಾರ್ಯದಲ್ಲಿ ಪ್ರಧಾನಿ ಮೋದಿ

ಮಾಮಲ್ಲಾಪುರಂ, ತಮಿಳುನಾಡು, ಅ 12:      ಐತಿಹಾಸಿಕ ಮಹಾಬಲಿಪುರಂ ಸಮುದ್ರ ತೀರದಲ್ಲಿ ಮುಂಜಾನೆಯ ನಡಿಗೆ ಮಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಇತ್ತೀಚೆಗೆ ಗಾಂಧಿ ಜಯಂತಿ ಸಂದರ್ಭದಲ್ಲಿ ಚಾಲನೆ ದೊರೆತ ಫಿಟ್ ಇಂಡಿಯಾ ಪ್ಲಾಗ್ ರನ್ ಅಭಿಯಾನದಂತೆ ಜಾಗಿಂಗ್ ಮಾಡುತ್ತಾ ಪ್ರಧಾನಿ ಪ್ಲಾಸ್ಟಿಕ್ ಹೆಕ್ಕಿ ತೆಗೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ದೊರೆತ ನಂತರ ಪ್ರಧಾನಿ ಆಗ್ಗಾಗ್ಗೆ ಪರಕೆ ಹಿಡಿದಿದ್ದನ್ನು ನೋಡಿದ್ದೇವೆ. ಇದೀಗ ಪ್ಲಾಗ್ ರನ್ ಮೂಲಕವೂ ಪ್ರಧಾನಿ ಸ್ವಚ್ಛತಾ ಕಾರ್ಯಕೈಗೊಂಡಿದ್ದು ಸುಮಾರು 30 ನಿಮಿಷಗಳ  ಈ ಕಾರ್ಯದಲ್ಲಿ ಸಂಗ್ರವಾದ ತ್ಯಾಜ್ಯವನ್ನು ಹೋಟೆಲ್ ಸಿಬ್ಬಂದಿಗೆ ಹಸ್ತಾಂತರಿಸಿದುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.  ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳೋಣ. ನಾವು ಫಿಟ್ ಆಗಿ ಆರೋಗ್ಯವಂತರಾಗಿರೋಣ ಎಂದು ಮೋದಿ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ಅವರ ಸಮುದ್ರತೀರದ ಸ್ವಚ್ಛತಾ ಕಾರ್ಯದ ಫೋಟೋ ಮತ್ತು ವಿಡಿಯೋಗಳನ್ನು ಸಹ ಪ್ರಧಾನಿ ಹಂಚಿಕೊಂಡಿದ್ದಾರೆ.  ಏಕಬಳಕೆಯ ಪ್ಲಾಸ್ಟಿಕ್ ನಿರ್ಮೊಲನೆಗೆ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಸಿಕ್ಕ ಅವಕಾಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಪ್ರಧಾನಿ ಮಾಡುತ್ತಲಿದ್ದಾರೆ.