ಬೆಳಗಾವಿ, ಮೇ 26, ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ಕೊಡುತ್ತಿದ್ದೇವೆ. ಇಲಾಖೆ ಬಳಿ ಒಂದು ಸಾವಿರ ಕೋಟಿ ಅನುದಾನ ಇದಕ್ಕಾಗಿ ಮೀಸಲಿಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.ನರೇಗಾ ಯೋಜನೆಯಡಿ 6021 ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಆರಂಭವಾಗಿದ್ದು, ರಾಜ್ಯದಲ್ಲಿ 9 ಲಕ್ಷಕ್ಕೂ ಅಧಿಕ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಿದ್ದೇವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಗಾದಡಿ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತಿದ್ದೇವೆ. ನರೇಗಾದಡಿ ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ಅನುದಾನ ಇಟ್ಟಿದೆ. ರಾಜ್ಯದಲ್ಲಿ ಈ ಯೋಜನೆಯಡಿ ಅಂತರ ಜಲ ಹೆಚ್ಚಿಸಲು ಒತ್ತು ನೀಡುತ್ತಿದ್ದೇವೆ. ಅಂತರ ಜಲ ಚೇತನ ಯೋಜನೆಯಡಿ ಮೂರು ವರ್ಷದಲ್ಲಿ ಅಂತರ ಜಲ ಹೆಚ್ಚಿಸುವ ಕಾರ್ಯ ನಡೆಯಲಿದೆ ಎಂದರು.ಈ ಯೋಜನೆಯಿಂದ ರೈತರಿಗೆ ಉಪಯೋಗ ಆಗುವ ಕಾಮಗಾರಿಯನ್ನು ಮಾಡುತ್ತೇವೆ. ರೈತರಿಗೆ ವೈಯಕ್ತಿಕವಾಗಿ ಅನುಕೂಲ ಆಗುವ ಕೆಲಸ ಮಾಡುತ್ತಿದ್ದೇವೆ. ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೂ ಉದ್ಯೋಗ ಕೊಡಲಾಗುವುದು. ಅನುಮತಿ ಪಡೆದು ಬಂದ ಕಾರ್ಮಿಕರಿಗೆ ಉದ್ಯೋಗ ನೀಡುತ್ತೇವೆ. ರಾಜ್ಯದಲ್ಲಿ ರೈತರಿಗೆ ಬದು ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದರು.ಗ್ರಾಮ ಪಂಚಾಯತಿ ಚುನಾವಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮ ಪಂಚಾಯತಿ ಮಟ್ಟದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಗ್ರಾಮ ಪಂಚಾಯತಿ ಚುನಾವಣೆಗೆ
ಸಿದ್ಧರಿದ್ದೇವೆ. ಚುನಾವಣೆಗೆ ಹೆದರಿ ಓಡಿ ಹೋಗುವ ಅಗತ್ಯ ಬಿಜೆಪಿಗೆ ಇಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ಆರೋಪವನ್ನು ಈಶ್ವರಪ್ಪ ತಳ್ಳಿಹಾಕಿದರು.ಗ್ರಾಮ ಪಂಚಾಯತಿ ಚುನಾವಣೆ ಮೂಲಕ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಕಟ್ಟಬೇಕಿಲ್ಲ. ಬಿಜೆಪಿ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗಿದೆ. ಬಿ.ಎಸ್. ಯಡಿಯೂರಪ್ಪನವರು ನಮ್ಮ ನಾಯಕರು. ತಮ್ಮ ಮತ್ತು ಯಡಿಯೂರಪ್ಪ ವಿಚಾರದಲ್ಲಿ ಏನು ಬೇಕಾದರೂ ಆರೋಪ ಮಾಡಲಿ. ಆರೋಪ ಮಾಡದಿದ್ದರೆ ವಿಪಕ್ಷದವರಿಗೆ ತಿಂದ ಅನ್ನ ಕರಗುವುದಿಲ್ಲ. ಅವರು ಏನಾದರೂ ಆಪಾದನೆ ಮಾಡಲಿ ಬಿಡಿ ಎಂದು ಈಶ್ವರಪ್ಪ ಹೇಳಿದರು.