ಲಂಡನ್, ಸೆ16 ಇಂಗ್ಲೆಂಡ್ ನೆಲದಲ್ಲಿ ತಾವು ತೋರಿರುವ ಸಾಧನೆಯಿಂದ ಆಸ್ಟ್ರೇಲಿಯಾ ತಂಡ ಅತ್ಯಂತ ಹೆಮ್ಮೆ ಪಡುವಂತಾಗಿದೆ ಎಂದು ಆಸೀಸ್ ನಾಯಕ ಟಿಮ್ ಪೈನ್ ಶ್ಲಾಘಿಸಿದ್ದಾರೆ.
ಭಾನುವಾರ ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಮುಕ್ತಾಯದವಾದ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 135 ರನ್ ಗಳಿಂದ ಸೋಲು ಅನುಭವಿಸಿತು. ಸರಣಿ 2-2 ಸಮಬಲದಲ್ಲಿ ಅಂತ್ಯ ಕಂಡಿತ್ತು. ಆದಾಗ್ಯೂ, 2017-18ರ ಸಾಲಿನಲ್ಲಿ ಆಸ್ಟ್ರೇಲಿಯಾ ತವರು ನೆಲದಲ್ಲಿ ಆ್ಯಷಸ್ ಸರಣಿ ಗೆದ್ದಿದ್ದರ ಫಲವಾಗಿ ಟ್ರೋಫಿಯನ್ನು ತನ್ನಲ್ಲೆ ಉಳಿಸಿಕೊಂಡಿತು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೈನ್, " ಸ್ಟೀವನ್ ಸ್ಮಿತ್ ಪಾಲಿಗೆ ಅದ್ಭುತ ಸರಣಿ ಇದಾಗಿದೆ. ಇವರಿಂದ ಹಲವು ಪಂದ್ಯಗಳನ್ನು ಗೆದ್ದಿದ್ದೇವೆ. ಆದರೆ, ನಮ್ಮ ತಂಡದ ಹಲವು ಭಾಗಗಳಲ್ಲಿ ಬೆಳವಣಿಗೆ ಸಾಧಿಸುವುದು ಅಗತ್ಯವಿದೆ. ಹಿಂದೆಂದೂ ಆಡಿರದ ರೀತಿ ಈ ಬಾರಿ ಆಂಗ್ಲರ ನಾಡಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಇದಕ್ಕಾಗಿ ನಾವು ಹೆಮ್ಮೆ ಪಡುತ್ತೇವೆ" ಎಂದು ಹೇಳಿದ್ದಾರೆ.
" ಇದೇ ರೀತಿ ಪ್ರದರ್ಶನ ಮುಂದುವರಿಸಿದ್ದೆ ಆದಲ್ಲಿ ವಿಶ್ವದ ಯಾವುದೇ ತಂಡ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನಮ್ಮ ತಂಡದಲ್ಲಿ ನಾಯಕರನ್ನು ರೂಪಿಸಲು ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಇದು ಕಠಿಣ ಪ್ರಯತ್ನವಾಗಲಿದೆ. ನಮ್ಮ ತಂಡದಲ್ಲಿ ಸ್ಟೀವನ್ ಸ್ಮಿತ್ ಅವರಂಥ ಪ್ರಮುಖ ಶಕ್ತಿ ಇದೆ. ಜತೆಗೆ, ಆಕ್ರಮಣಕಾರಿ ವೇಗಿಗಳನ್ನು ಒಳಗೊಂಡಿದ್ದೇವೆ. ಮುಂದಿನ ಹಲವು ವರ್ಷಗಳ ಕಾಲ ನಮ್ಮನ್ನು ಸೋಲಿಸುವುದು ಇತರೆ ತಂಡಗಳಿಗೆ ಕಠಿಣವಾಗಲಿದೆ" ಎಂದು ಪೈನ್ ಅಭಿಪ್ರಾಯಪಟ್ಟರು.
ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆದ್ದು ಆ್ಯಷಸ್ ಟೆಸ್ಟ್ ಸರಣಿಯ 2-2 ಅಂತರದಲ್ಲಿ ಸಮಬಲ ಸಾಧಿಸಿತು. ಆ ಮೂಲಕ 47 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪುರುಷರ ಆ್ಯಷಸ್ ಸರಣಿ ಡ್ರಾನಲ್ಲಿ ಸಮಾಪ್ತಿಯಾಯಿತು.
1972ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಕೊನೆಯ ಬಾರಿ ಆ್ಯಷಸ್ ಟೆಸ್ಟ್ ಸರಣಿ ಡ್ರಾ ಆಗಿತ್ತು. ಇದಾದ ಬಳಿಕ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳ ತಲಾ ಐದು ಬಾರಿ ಜಯ ಸಾಧಿಸಿವೆ.
ಭಾನುವಾರ 399 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 77 ಓವರ್ಗಳಿಗೆ 263 ರನ್ಗಳಿಗೆ ಆಲ್ಔಟ್ ಆಗಿ ಸೋಲು ಒಪ್ಪಿಕೊಂಡಿತು. ಆಸ್ಟ್ರೇಲಿಯಾ ಪರ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಮ್ಯಾಥ್ಯೂ ವೇಡ್(117 ರನ್) ವೃತ್ತಿ ಜೀವನದ ನಾಲ್ಕನೇ ಶತಕ ಸಿಡಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡಲೇ ಇಲ್ಲ. ಪರಿಣಾಮ ಪಂದ್ಯವನ್ನು ಕೈಚೆಲ್ಲಿಕೊಳ್ಳಬೇಕಾಯಿತು.