ನೆರೆ ಸಂತ್ರಸ್ಥ ಜಿಲ್ಲೆಗಳ ವಿದ್ಯಾರ್ಥಿಗಳ ಶಾಲಾ ದಾಖಲಾತಿ,ಪಠ್ಯ ಪುಸ್ತಕ ಉಚಿತವಾಗಿ ನೀಡಲು ಆದೇಶ

ಬೆಂಗಳೂರು,ಆ 21           ನೆರೆ ಸಂತ್ರಸ್ಥರ ಜಿಲ್ಲೆಗಳಲ್ಲಿ ಶಾಲಾ ಕಟ್ಟಡಗಳು ಮುಳುಗಡೆಗೊಂಡಕಾರಣ  ಪಠ್ಯಪುಸ್ತಕ,ದಾಖಲೆಗಳು ಹಾಗೂ ಶಾಲಾ ಸಮವಸ್ತ್ರಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ   ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ  ತುರ್ತಾಗಿ   ಕ್ರಮ  ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 

ನೆರೆಯಿಂದ ಹಾನಿಗೊಳಗಾದ ಶಾಲೆಗಳು, ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿ ಹಾಗು ವಿವರಗಳನ್ನು ಸಂಗ್ರಹಿಸುವುದು, ವಿದ್ಯಾರ್ಥಿಗಳು ಇತರ ಪ್ರದೇಶಗಳಲ್ಲಿ  ದಾಖಲಾತಿ ಕೋರಿ ಬಂದಲ್ಲಿ  ಸದರಿ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡುವುದು.ದಾಖಲಾದ ಮಕ್ಕಳಿಗೆ ಶಾಲಾ ಸಮವಸ್ತ್ರವನ್ನು ಕಡ್ಡಾಯಗೊಳಿಸದಿರುವಂತೆ  ಆಯುಕ್ತರು  ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ. 

ಇಂತಹ ವಿದ್ಯಾರ್ಥಿಗಳನ್ನು, ಶಾಲೆಗೆ ದಾಖಲಾತಿ ಮಾಡುವಾಗ ದಾಖಲೆ ಒದಗಿಸಲು ಕೋರಿದರೆ,  ಪೋಷಕರಿಂದ ಸ್ವಯಂ ಧೃಡೀಕರಣ ಪತ್ರ ಪಡೆದು ಹಿಂದೆ ವಿದ್ಯಾಭ್ಯಾಸ ಮಾಡುತ್ತಿದ್ದ ತರಗತಿಗೆ ದಾಖಲು ಮಾಡಿಕೊಳ್ಳಬೇಕು. .ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಪೂರೈಸಲು ಪ್ರಾಥಮಿಕ ಮತ್ತು  ಪ್ರೌಢ ಶಾಲೆಗಳ  ಬೇಡಿಕೆಗಳನ್ನು  ತಕ್ಷಣ  ರಾಜ್ಯ  ಪಠ್ಯಪುಸ್ತಕ ಸೊಸೈಟಿಗೆ ರವಾನಿಸುವುದು.ಜಿಲ್ಲಾ ಉಪ ನಿರ್ದೇಶಕರಿಂದ ಸ್ವೀಕೃತವಾದ ಬೇಡಿಕೆಗಳಿಗೆ ಅನುಸಾರವಾಗಿ ಉಚಿತವಾಗಿ ಪಠ್ಯ ಪುಸ್ತಕ ಪೂರೈಸಲು ಕ್ರಮವಹಿಸುವಂತೆ ನಿರ್ದೇಶನ ನೀಡಿದ್ದಾರೆ. 

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮುಳುಗಡೆಯಾದ ಶಾಲೆ,ಕಟ್ಟಡಗಳ ಹಾನಿ,ಮರು ನಿರ್ಮಾಣ, ದುರಸ್ಥಿಗೆ ತುರ್ತಾಗಿ ಕ್ರಮ ಕೈಗೊಳ್ಳಲು ಇಲಾಖೆಗೆ ಸಮಗ್ರ ಮಾಹಿತಿಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಹಾನಿಗೊಳಗಾದ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ  ಆಯುಕ್ತರು ಆದೇಶದಲ್ಲಿ  ತಾಕೀತು ಮಾಡಿದ್ದಾರೆ.