ಕೊರೋನಾ ವೈರಸ್ ಗ್ರಾಮೀಣ ಭಾಗಕ್ಕೆ ಹರಡದಂತೆ ನೋಡಿಕೊಳ್ಳಿ – ಸರ್ವ ಪಕ್ಷ ಮುಖಂಡರ ಸಭೆಯಲ್ಲಿ ಪ್ರತಿಪಕ್ಷ ನಾಯಕರ ಆಗ್ರಹ

ಬೆಂಗಳೂರು, ಮಾ. 29, ಜಾಗತಿಕವಾಗಿ ಮರಣ ಮೃದಂಗ ಭಾರಿಸಿರುವ ಕೊರೋನಾ ವೈರಸ್ ಭೀತಿ ರಾಜ್ಯವನ್ನೂ ಸಹ ಆವರಿಸಿದ್ದು, ಇದು ಮೂರನೇ ಹಂತ ತಲುಪದಂತೆ ಹಾಗೂ ಗ್ರಾಮೀಣ ಭಾಗಕ್ಕೆ ಹರಡಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಕ್ಷ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹಬ್ಬುತ್ತಿರುವ ಕೊರೊನಾ ಸೋಂಕು ಹಿನ್ನಲೆಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು ಹಾಗೂ ಲಾಕ್ಡೌನ್ನಿಂದಾಗಿ ಎದುರಾಗಿರುವ ಪರಿಸ್ಥಿತಿ, ಎದುರಿಸುವ ವಿಧಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರ ಸ್ವಾಮಿ ಮತ್ತಿತರರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.  
ವಿಧಾನಸೌಧದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೊನಾದಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮಾರ್ಚ್ ೧೩ ರಿಂದ ನಿರಂತರ ಸಭೆಗಳನ್ನು ನಡೆಸಿ ಪರಿಸ್ಥಿತಿ ಅವಲೋಕಿಸುತ್ತಿದೆ. ಕೊರೊನಾ ತಡೆ ನಿಟ್ಟಿನಲ್ಲಿ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದ್ದು. ಜನ ಜೀವನಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಸಭೆಯಲ್ಲಿ ಬೇರೆ ಇಲಾಖೆಗೆ ಕೊಡುವ ಹಣವನ್ನು ಸ್ವಲ್ಪ ದಿನ ನಿಲ್ಲಿಸೋಣ. ಆ ಹಣವನ್ನು ಕೊರೋನಾ ತಡೆಗಟ್ಟಲು ವಿನಿಯೋಗಿಸಲಾಗುವುದು. ಇದಕ್ಕೆ ತಾವು ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಮನವಿಮಾಡಿದರು.  
ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕರು ಕೆಲ ಬದಲವಾಣೆಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಸಮರ್ಪಕವಾಗಿ ದಿನಸಿ ಸಿಗುವಂತೆ ವ್ಯವಸ್ಥೆ ಮಾಡಬೇಕು.108 ಆಂಬುಲೆನ್ಸ್ ಗಳನ್ನು ಟೆಸ್ಟಿಂಗ್ ಲ್ಯಾಬ್ ರೀತಿ ಬಳಸಿಕೊಳ್ಳಬೇಕು. ಸಾಕಷ್ಟು ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗುವಾಗ ರಸ್ತೆ ಮದ್ಯೆ ಸಿಕ್ಕಿಹಾಕಿಕೊಂಡಿದ್ದಾರೆ ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಕರ್ತವ್ಯ ನಿರತ ಪೋಲೀಸರಿಗೆ ಸೂಕ್ತ ಸೌಲಭ್ಯ ಕೊಡಬೇಕು. ಪ್ರತಿದಿನ ಅವರ ಆರೋಗ್ಯ ತಪಾಸಣೆ ಸಹ ಮಾಡಬೇಕು. ರೈತರು ಬೆಳೆದ ತರಕಾರಿಗಳನ್ನು ಸರ್ಕಾರವೇ ಕೊಂಡುಕೊಂಡು ಹಾಪ್ ಕಾಮ್ಸ್ ಮೂಲಕ ಮಾರಾಟ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ಮಾಡಿದರು.
ಇದಕ್ಕೆ ಸಹಕಾರ ವ್ಯಕ್ತಪಡಿಸಿದ ಯಡಿಯೂರಪ್ಪ, ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡೋಣ.  ಇದರಲ್ಲಿ ಯಾವುದೇ ರಾಜಕೀಯ ಬೇಡ. ತಮ್ಮ ಸಲಹೆ ಸೂಚನೆಗಳನ್ನು ಸಹ  ಪರಿಗಣಿಸುತ್ತೆನೆ ಎಂದರು.
ಮುಖ್ಯಮಂತ್ರಿಗಳ ಮಾತಿಗೆ ತೃಪ್ತರಾಗದ ಡಿ.ಕೆ.ಶಿವಕುಮಾರ್, ಬಹಳ ತಡವಾಗಿಯಾದರೂ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ.   ಕೊರೊನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ಸರ್ಕಾರದ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ ಹಾಗೂ ವೈಯಕ್ತಿಕವಾಗಿಯೀ ಬೆಂಬಲವಿದೆ ಎಂದರು.
ಆದರೆ ಈ ಪಿಡುಗು ನಿವಾರಣೆ ವಿಚಾರದಲ್ಲಿ ಉಪಮುಖ್ಯಮಂತ್ರಿಗಳು, ಸಚಿವರ ನಡುವೆ ಸಮನ್ವಯತೆಯ ಕೊರತೆಯಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ, ಭಯ ಮೂಡಿಸುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಹೋಗುವುದಿಲ್ವ. ಆದರೆ ಅವರಲ್ಲಿ ಸಮನ್ವಯ ತರುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ ಎಂದು ಶಿವಕುಮಾರ್ ಹೇಳಿದರು.
ಸಾಮಾನ್ಯ ಜನರು ಕೊರೊನಾ ಸೋಂಕು ನಿವಾರಣೆಗೆ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಯಾರಿಗೂ ಮಾಸ್ಕ್ ಸಿಗುತ್ತಿಲ್ಲ. ಇದನ್ನು ಉಚಿತವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಕ್ಷಕರಿಗೇ ಸುರಕ್ಷೆ ಇಲ್ಲದಿದ್ದರೆ ಹೇಗೆ? ಎಂದು ಶಿವಕುಮಾರ್ ಪ್ರಶ್ನಿಸಿದರು.
ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಜನ ಕಂಗಾಲಾಗಿದ್ದಾರೆ. ಇಲ್ಲಿ ಇರಲೂ ಆಗದೆ,  ತಮ್ಮೂರಿಗೆ ಹೋಗಲು ಆಗದೆ ಪರಿತಪಿಸುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ಪರಿಹಾರ ಕಲ್ಪಿಸಬೇಕು. ಕೊರೋನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆ ಆಗಬಾರದು ಎಂದರು.  
ಕೊರೋನಾ ಇಡೀ ರಾಜ್ಯದ, ದೇಶದ, ವಿಶ್ವದ ಸಮಸ್ಯೆ. ಬರೀ ಆಡಳಿತರೂಢ ಸರಕಾರದ, ಪಕ್ಷದ ಸಮಸ್ಯೆ ಅಲ್ಲ. ಇದು ಎಲ್ಲರ ಸಮಸ್ಯೆ. ಎಲ್ಲರೂ ಒಗ್ಗೂಡಿ ಹೋರಾಡಬೇಕು. ಈ ವಿಚಾರದಲ್ಲಿ ಯಾರೊಬ್ಬರು ಹೆಚ್ಚು  ಕಡಿಮೆ ಎಂಬುದಿಲ್ಲ  ಎಂದರು.ರೈತರು ಬೆಳೆದ ಬೆಳೆಗಳು  ವಿಲೇವಾರಿ ಆಗುತ್ತಿಲ್ಲ. ರೇಷ್ಮೆ ಗೂಡುಗಳು ಬಿಕರಿ ಆಗದೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಅವರು, ಇವರು ಎನ್ನದೇ ಎಲ್ಲ  ವರ್ಗದವರ ಸಂಕಷ್ಟಕ್ಕೆ ಪರಿಹಾರ ಸೂತ್ರಗಳನ್ನು ರೂಪಿಸಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.