ಪೌರತ್ವ ತಿದ್ದುಪಡಿ ಕಾಯ್ದೆ ಅರ್ಥಮಾಡಿಕೊಳ್ಳಲು ಪ್ರತಿಪಕ್ಷಗಳು ಸಿದ್ಧವಿಲ್ಲ: ಪ್ರಧಾನಿ ಮೋದಿ

ಕೋಲ್ಕತಾ, ಜ 12 :        ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಜಾಗೃತಿ ಮೂಡಿಸಲು ಯುವಕರು ಕೈಜೋಡಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

 ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಭಾನುವಾರ ರಾಮಕೃಷ್ಣ ಮಿಷನ್ನ ಪ್ರಧಾನ ಕಚೇರಿ ಬೇಲೂರು ಮಠದಲ್ಲಿ ಭಾಷಣ ಮಾಡಿದ ಪ್ರಧಾನಿ, "ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನ್ನು ಅರ್ಥಮಾಡಿಕೊಳ್ಳಲು ಪ್ರತಿಪಕ್ಷಗಳು ಸಿದ್ಧವಾಗಿಲ್ಲ" ಎಂದು ಆರೋಪಿಸಿದರು. 

 "ಸಿಎಎ ಯಾರ ಪೌರತ್ವವನ್ನೂ ಹಿಂತೆಗೆದುಕೊಳ್ಳುವುದಲ್ಲ, ಅದು ಪೌರತ್ವವನ್ನು ನೀಡುತ್ತದೆ" ಎಂದು ಪುನರುಚ್ಚರಿಸಿದ ಪ್ರಧಾನಿ, "ಪಾಕಿಸ್ತಾನದ ದಮನಿತ ಧಾಮರ್ಿಕ ಅಲ್ಪಸಂಖ್ಯಾತರಿಗೆ ಭಾರತ ಪೌರತ್ವ ನೀಡಬೇಕು ಎಂದು ಮಹಾತ್ಮ ಗಾಂಧಿ ಸೇರಿದಂತೆ ಮಹಾನ್ ನಾಯಕರು ನಂಬಿದ್ದರು" ಎಂದು ಹೇಳಿದರು.  

 ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರು ರಾಜ್ ಭವನದಲ್ಲಿ ಪ್ರಧಾನಮಂತ್ರಿಯನ್ನು ಭೇಟಿಯಾದ ನಂತರ, ಸಿಎಎ ಕುರಿತು ಕೇಂದ್ರ ಸರ್ಕಾರದ ಅಧಿಸೂಚನೆ ಕಾಗದದಲ್ಲಿ ಮಾತ್ರ ಉಳಿಯುತ್ತದೆ ಎಂದು ತಿಳಿಸಿದ್ದರು.

 ಸಿಎಎ ಕುರಿತು ಕೇಂದ್ರ ಸರ್ಕಾರದ ಅಧಿಸೂಚನೆಯು ಕಾಗದದ ಮೇಲೆ ಮಾತ್ರ ಉಳಿಯುತ್ತದೆ. ಇದನ್ನು ಕನಿಷ್ಠ ಪಕ್ಷ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಬ್ಯಾನರ್ಜಿ ಹೇಳಿದ್ದರು.    

  "ಧರ್ಮ, ಜಾತಿ ಆಧಾರದ ಮೇಲೆ ಪ್ರಜಾಪ್ರಭುತ್ವದಲ್ಲಿ ಏನನ್ನೂ ಮಾಡಬಾರದು, ಅದು ಅಮಾನವೀಯ ಮತ್ತು ಕಾನೂನುಬಾಹಿರ" ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.  

 ಈ ಮಧ್ಯೆ ಎರಡು ದಿನಗಳ ಭೇಟಿಗೆ ಶನಿವಾರ ಕೋಲ್ಕತ್ತಾಗೆ ಮೋದಿ ಬಂದಾಗಿನಿಂದ ಪ್ರತಿಭಟನೆಗಳು ನಡೆಯುತ್ತಿದ್ದು ಭಾನುವಾರ ಕೂಡ ಮೋದಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆಗಳು ಮುಂದುವರಿದಿವೆ.  

 ವಿದ್ಯಾರ್ಥಿ ಕಾರ್ಯಕರ್ತರು "ಮೋದಿ ಹಿಂತಿರುಗಿ - ಗೋ ಬ್ಯಾಕ್ ಮೋದಿ" ಎಂಬ ಪೋಸ್ಟರ್ ಗಳನ್ನು ಹೊತ್ತಿದ್ದರು. ನಗರ ಮತ್ತು ರಾಜ್ಯದ ಹಲವೆಡೆ ನಡೆದ ಪ್ರತಿಭಟನೆಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.