ನವದೆಹಲಿ, ಫೆ 3 : ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ, ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ನಿಯಮ 267 ರ ಅಡಿ ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಎರಡನ್ನೂ ಚರ್ಚಿಗೆ ಕೈಗೆತ್ತಿಕೊಳ್ಳಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೇಲ್ಮನೆ ಕಲಾಪವನ್ನು ಮೂರು ಬಾರಿ ಮುಂದೂಡಲಾಗಿತ್ತು.
ಪ್ರತಿಪಕ್ಷಗಳ ಬೇಡಿಕೆಯನ್ನು ಸಭಾಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದರು. ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಸದಸ್ಯರಿಗೆ ಮಾತನಾಡಲು ಸಾಕಷ್ಟು ಅವಕಾಶ ಸಿಗುತ್ತದೆ ಎಂದು ಸಭಾಪತಿ ಹೇಳಿದರು.
ಮಧ್ಯಾಹ್ನ 3 ಗಂಟೆಗೆ ಸದನ ಸಮಾವೇಶಗೊಂಡ ಕೂಡಲೇ ಎರಡೂ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷದ ಸದಸ್ಯರು ಬಾವಿಗೆ ಇಳಿದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮತ್ತು ಪಿ.ಎಲ್.ಪುನಿಯಾ, ಹುಸೇನ್ ದಳವಾಯಿ ಮತ್ತು ಪ್ರತಿಪಕ್ಷ ಗಳ ಇತರ ಸದಸ್ಯರು ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು.
ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ವಂದನಾ ನಿರ್ಣಯ ಚರ್ಚೆಯನ್ನು ಆರಂಭಿಸಲು ಪ್ರಯತ್ನಿಸಿದರು, ಚರ್ಚೆಯನ್ನು ಆರಂಭಿಸುವಂತೆ ಬಿಜೆಪಿ ಸದಸ್ಯ ಭೂಪೇಂದ್ರ ಯಾದವ್ ಗೆ ಸೂಚಿಸಿದರು. ಗದ್ದಲದ ಮಧ್ಯೆ, ಯಾದವ್ ಭಾಷಣ ಮಾಡಲು ಪ್ರಯತ್ನಿಸಿದರಾದರೂ, ಯಾರಿಗೂ ಕೇಳದಂತಾಯಿತು.
ಉಪಸಭಾಪತಿಯವರು ಪ್ರತಿಪಕ್ಷದ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಅವರ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಕಿವಿಗೊಡದೆ ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು.
ಗದ್ದಲದ ನಡುವೆ ಉಪ ಸಭಾಪತಿಯವರು ಕಲಾಪವನ್ನು ಸಂಜೆ 3.10ಕ್ಕೆ ಮುಂದೂಡಿದರು.
ಸದನ ಮತ್ತೆ ಸೇರಿದಾಗ ಇದೇ ಪರಿಸ್ಥಿತಿ ಮುಂದುವರೆದಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.